ಲಿಂಗಾಯತರ ಬೇಡಿಕೆಗೆ ದನಿಗೂಡಿಸಿದ ಕೇದಾರನಾಥ ಅರ್ಚಕ

Update: 2018-05-01 04:31 GMT

ಹೊಸದಿಲ್ಲಿ, ಮೇ 1: ವೀರಶೈವ- ಲಿಂಗಾಯತ ಸಮುದಾಯವನ್ನು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ ಎಂದು ಘೋಷಿಸುವಂತೆ ಹಿಂದೂಗಳ ಪವಿತ್ರ ಯಾತ್ರಾಸ್ಥಳವಾದ ಕೇದಾರನಾಥ ದೇವಾಲಯದ ಮುಖ್ಯ ಅರ್ಚಕ, ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.

ಕರ್ನಾಟಕದ ಬಹುಸಂಖ್ಯಾತ ಸಮುದಾಯವನ್ನು ಒಡೆಯಲು ಸಿದ್ದರಾಮಯ್ಯ ಸರ್ಕಾರ ಹುನ್ನಾರ ನಡೆಸಿದೆ ಎಂಬ ಬಿಜೆಪಿ ಆರೋಪವನ್ನು ಎದುರಿಸಲು ಕಾಂಗ್ರೆಸ್‌ಗೆ ಈ ಮೂಲಕ ಪ್ರಮುಖ ಅಸ್ತ್ರ ಲಭಿಸಿದಂತಾಗಿದೆ.

ಕರ್ನಾಟಕ ಸರ್ಕಾರ ಮಾರ್ಚ್‌ನಲ್ಲಿ ಕೇಂದ್ರಕ್ಕೆ ಪತ್ರ ಬರೆದು ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಮತ್ತು ವೀರಶೈವರನ್ನು ಯಥಾಸ್ಥಿತಿಯಲ್ಲಿ ಉಳಿಸುವಂತೆ ಶಿಫಾರಸ್ಸು ಮಾಡಿತ್ತು. ಇದು ವೀರಶೈವರ ಕೆಂಗಣ್ಣಿಗೆ ಗುರಿಯಾಗಿತ್ತು. ಕೇದಾರ ಜಗದ್ಗುರು ಪೀಠದ ಮುಖ್ಯ ಅರ್ಚಕ ರವಳ ಭೀಮಾಶಂಕರಲಿಂಗ ಅವರು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿ, "ವೀರಶೈವ- ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದು ನ್ಯಾಯ ಸಮ್ಮತ. ಆದರೆ ಕರ್ನಾಟಕ ಸರ್ಕಾರ ವೀರಶೈವ ಹಾಗೂ ಲಿಂಗಾಯತರನ್ನು ಒಡೆಯಲು ಹೊರಟಿರುವುದು ಸರಿಯಲ್ಲ. ವೀರಶೈವ- ಲಿಂಗಾಯತ ಒಂದೇ. ಇದನ್ನು ರಾಜಕೀಯ ಕಾರಣಗಳಿಗೆ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ನಮ್ಮ ಸಂಘಟನೆ ಪತ್ರ ಬರೆದಿದೆ ಎಂದು ವಿವರಿಸಿದ್ದಾರೆ.

ಕೇದಾರನಾಥಕ್ಕೆ 2017ರ ಅಕ್ಟೋಬರ್ 20ಕ್ಕೆ ಮೋದಿ ಭೇಟಿ ನೀಡಿದ ಅವಧಿಯಲ್ಲಿ ಈ ಕುರಿತ ಮನವಿಪತ್ರ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ದೇಶದ ಹಲವು ಧರ್ಮಗಳಲ್ಲಿ ವೀರಶೈವ ಧರ್ಮವೂ ಒಂದು. ಇದು ಪಂಚಪೀಠಗಳನ್ನು ಹೊಂದಿದ್ದು, ರಂಭಾಪುರಿ, ಉಜ್ಜಯಿನಿ, ಉಖಿಮಠ, ಶ್ರೀಶೈಲ ಮತ್ತು ಕಾಶಿಯಲ್ಲಿ ಪ್ರಧಾನ ಪೀಠಗಳಿವೆ ಎಂದು ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News