ಚೆನ್ನೈಗೆ ಗೆಲುವಿನ ಓಟ ಮುಂದುವರಿಸುವ ತವಕ
ಕೋಲ್ಕತಾ, ಮೇ 2: ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ವಾಪಸಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದ್ದು, ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. 8 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿರುವ ಚೆನ್ನೈ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.
ಕೆಕೆಆರ್ ತಂಡ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 176 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಚೆನ್ನೈ ತಂಡ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಪ್ರಾಬಲ್ಯ ಸಾಧಿಸಿತ್ತು. ಶೇನ್ ವಾಟ್ಸನ್ ಹಾಗೂ ಧೋನಿ ಬಾರಿಸಿದ ಅರ್ಧಶತಕಗಳ ಕೊಡುಗೆ ನೆರವಿನಿಂದ ಚೆನ್ನೈ ಮೂರನೇ ಬಾರಿ 200ಕ್ಕೂ ಅಧಿಕ ರನ್ ಗಳಿಸಿತು. ಯುವ ವೇಗದ ಬೌಲರ್‌ಗಳಾದ ಲುಂಗಿ ಗಿಡಿ ಹಾಗೂ ಕೆ.ಎಂ.ಆಸಿಫ್ ಡೆಲ್ಲಿ ಆಟಗಾರರನ್ನು ಕಟ್ಟಿಹಾಕಿದರು. ಈ ಮೂಲಕ ಚೆನ್ನೈಗೆ ಆರನೇ ಗೆಲುವು ತಂದುಕೊಟ್ಟರು.
ಧೋನಿ ಮುಂಚೂಣಿಯಲ್ಲಿ ನಿಂತು ಚೆನ್ನೈ ತಂಡ ಬ್ಯಾಟಿಂಗ್ ಹಾಗೂ ನಾಯಕತ್ವದಲ್ಲಿ ಯಶಸ್ಸು ಸಾಧಿಸಲು ನೆರವಾಗುತ್ತಿದ್ದಾರೆ. ಧೋನಿ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಿದ್ದು,ಇದು ತಂಡದ ಶಕ್ತಿಯನ್ನು ತೋರಿಸುತ್ತಿದೆ.
ಎಂಆರ್‌ಎಫ್ ಪೇಸ್ ಫೌಂಡೇಶನ್‌ನಲ್ಲಿ ಪಳಗಿರುವ ಆಸಿಫ್ ತನ್ನ ಚೊಚ್ಚಲ ಪಂದ್ಯದಲ್ಲಿ ಎರಡು ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಆದರೆ, ಕೇರಳದ ಯುವ ಬೌಲರ್ 3 ಓವರ್‌ಗಳಲ್ಲಿ 43 ರನ್ ಬಿಟ್ಟುಕೊಟ್ಟಿದ್ದಾರೆ.
ಕಳೆದ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಬ್ಯಾಟಿಂಗ್‌ನಲ್ಲಿ ಪರದಾಟ ನಡೆಸಿದ್ದ ವಾಟ್ಸನ್ ಈ ಬಾರಿ ಚೆನ್ನೈ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಋತುವಿನಲ್ಲಿ 106 ರನ್ ಗಳಿಸಿರುವ ಆಸ್ಟ್ರೇಲಿಯದ ಹಿರಿಯ ಆಲ್‌ರೌಂಡರ್ ವಾಟ್ಸನ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ದಾಖಲಿಸಿದ್ದರು.
ಅಂಬಟಿ ರಾಯುಡು ಕೂಡ ಬ್ಯಾಟಿಂಗ್ ಸರದಿಯಲ್ಲಿ ಆರಂಭಿಕನಾಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸುತ್ತಿದ್ದು ಒಟ್ಟು 370 ರನ್ ಗಳಿಸಿದ್ದಾರೆ.
ನಾಯಕ ಧೋನಿ ಕೂಡ ಭರ್ಜರಿ ಫಾರ್ಮ್‌ನಲ್ಲಿದ್ದು 71.50ರ ಸರಾಸರಿಯಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ 34 ಎಸೆತಗಳಲ್ಲಿ ಔಟಾಗದೆ 70 ರನ್ ಗಳಿಸಿದ ಧೋನಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
ಕೆಕೆಆರ್ ವಿರುದ್ಧ 12-7 ಗೆಲುವು-ಸೋಲಿನ ದಾಖಲೆ ಹೊಂದಿರುವ ಧೋನಿ ನೇತೃತ್ವದ ಚೆನ್ನೈ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.
ಇನ್ನು ಆರು ಪಂದ್ಯಗಳನ್ನು ಆಡಲಿರುವ ಕೆಕೆಆರ್ ಈಡನ್‌ಗಾರ್ಡನ್ಸ್‌ನಲ್ಲಿ ಪಂದ್ಯ ಸೋಲಲು ಇಷ್ಟಪಡುತ್ತಿಲ್ಲ. ತವರು ಮೈದಾನ ಈಡನ್‌ಗಾರ್ಡನ್ಸ್ ನಲ್ಲಿ ಇನ್ನೂ 3 ಪಂದ್ಯಗಳನ್ನು ಆಡಲಿರುವ ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ಪ್ಲೇ-ಆಫ್ ಸುತ್ತಿಗೇರುವ ವಿಶ್ವಾಸದಲ್ಲಿದೆ.
ಕೆಕೆಆರ್ ಈ ತನಕ ವಿದೇಶದ ಮೂವರು ಆಟಗಾರರಾದ ಕ್ರಿಸ್ ಲಿನ್, ಆ್ಯಂಡ್ರೆ ರಸ್ಸೆಲ್ ಹಾಗೂ ಸುನೀಲ್ ನರೇನ್ ಆಟವನ್ನೇ ಹೆಚ್ಚು ನೆಚ್ಚಿ ಕೊಂಡಿದೆ.
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 52 ಎಸೆತಗಳಲ್ಲಿ ಔಟಾಗದೆ 62 ರನ್ ಗಳಿಸಿದ ಲಿನ್ ಕೆಕೆಆರ್ ಆರು ವಿಕೆಟ್‌ಗಳಿಂದ ಜಯ ಸಾಧಿಸಲು ಕಾರಣರಾಗಿದ್ದರು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಈ ವರೆಗೆ ಅರ್ಧಶತಕ ಗಳಿಸದೇ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ.
ಯುವ ಆಟಗಾರ ಶುಭ್‌ಮನ್ ಗಿಲ್‌ರನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸುತ್ತಿರುವ ಕೆಕೆಆರ್ ಅವರ ಪ್ರತಿಭೆ ಬಳಸಿಕೊಳ್ಳಲು ವಿಫಲವಾಗಿದೆ. ಅಂಡರ್-19 ವಿಶ್ವಕಪ್‌ನ ಸ್ಟಾರ್ ಆಟಗಾರನಾಗಿರುವ ಗಿಲ್ ಟೂರ್ನಿಯಲ್ಲಿ ಈ ತನಕ 3,6,14,37 ಹಾಗೂ ಔಟಾಗದೆ 5 ರನ್ ಗಳಿಸಿದ್ದಾರೆ.