ಐಪಿಎಲ್ ದುಬಾರಿ ಆಟಗಾರರಿಂದ ಕಳಪೆ ಪ್ರದರ್ಶನ

Update: 2018-05-02 18:25 GMT

ಹೊಸದಿಲ್ಲಿ, ಮೇ 2: ಹನ್ನೊಂದನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲಾರ್ಧದ ಪಂದ್ಯಗಳು ಕೊನೆಗೊಂಡಿದ್ದು, ಈ ವರ್ಷ ಭಾರೀ ಮೊತ್ತಕ್ಕೆ ಹರಾಜಾಗಿ ಗಮನ ಸೆಳೆದಿರುವ ಆಟಗಾರರು ತಮ್ಮ ಮೊತ್ತಕ್ಕೆ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ.

►ಶಾರ್ಟ್(4 ಪಂದ್ಯಗಳು, 65 ರನ್, 97.01 ಸ್ಟ್ರೈಕ್‌ರೇಟ್) 2017-18ರ ಬಿಗ್ ಬಾಶ್ ಲೀಗ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ಶಾರ್ಟ್ ತನ್ನ ಮೂಲ ಬೆಲೆಗಿಂತ 20 ಪಟ್ಟು ಹೆಚ್ಚಿನ ವೌಲ್ಯಕ್ಕೆ(4 ಕೋ.ರೂ.) ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದರು. ಬಿಬಿಎಲ್‌ನಲ್ಲಿ ಹೊಬರ್ಟ್ ತಂಡದ ಪರ ನೀಡಿರುವ ಅತ್ಯುತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಅವರು ಐಪಿಎಲ್‌ನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗಿದ್ದರು. 27ರ ಹರೆಯದ ಶಾರ್ಟ್ ಐಪಿಎಲ್‌ನಲ್ಲಿ ಈ ವರೆಗೆ 4,6,11 ಹಾಗೂ 44 ರನ್ ಗಳಿಸಿದ್ದಾರೆ.

►ಗ್ಲೆನ್ ಮ್ಯಾಕ್ಸ್‌ವೆಲ್(7 ಪಂದ್ಯಗಳು, 126 ರನ್) ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ 9 ಕೋ.ರೂ.ಗೆ ಹರಾಜಾಗಿದ್ದ ಮ್ಯಾಕ್ಸ್ ವೆಲ್ ಡೆಲ್ಲಿ ತಂಡದ ದುಬಾರಿ ಆಟಗಾರನಾಗಿದ್ದರು. ಹರಾಜಿನಲ್ಲಿ ಮೂರು ಫ್ರಾಂಚೈಸಿಗಳು ಮ್ಯಾಕ್ಸ್ ವೆಲ್ ಖರೀದಿಸಲು ಮುಂದಾಗಿದ್ದವು. ಕೊನೆಯಲ್ಲಿ ಬಿಡ್ ಸಲ್ಲಿಸಿದ ಡೆಲ್ಲಿ ಆಸ್ಟ್ರೇಲಿಯ ಆಲ್‌ರೌಂಡರ್‌ನನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಮ್ಯಾಕ್ಸ್‌ವೆಲ್ ಕಳಪೆ ಫಾರ್ಮ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿಯ ಕಳಪೆ ಪ್ರದರ್ಶನಕ್ಕೆ ನೇರ ಸಂಬಂಧ ಹೊಂದಿದೆ. ಮ್ಯಾಕ್ಸ್‌ವೆಲ್ ಈವರೆಗೆ 17,13, 47, 4, 12, 27 ಹಾಗೂ 6 ರನ್ ಗಳಿಸಿದ್ದಾರೆ. 7.22ರ ಇಕಾನಮಿ ರೇಟ್‌ನಲ್ಲಿ 4 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

►ಜಯದೇವ್ ಉನದ್ಕಟ್(7 ಪಂದ್ಯಗಳು, 4 ವಿಕೆಟ್‌ಗಳು)ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತದ ಓರ್ವ ಕೌಶಲ್ಯಭರಿತ ವೇಗದ ಬೌಲರ್ ಎನಿಸಿ ಕೊಂಡಿರುವ ಜಯದೇವ್ ಉನದ್ಕಟ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ 11.5 ಕೋ.ರೂ.ಗೆ ಹರಾಜಾಗುವ ಮೂಲಕ ಗಮನ ಸೆಳೆದಿದ್ದರು. ಕಳೆದ ವರ್ಷದ ಐಪಿಎಲ್‌ನಲ್ಲಿ ರೈಸಿಂಗ್ ಸೂಪರ್‌ಜೈಂಟ್ಸ್ ಪರ 12 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಕಬಳಿಸಿದ್ದ ಉನದ್ಕಟ್ ಭಾರೀ ಬೆಲೆಗೆ ಹರಾಜಾಗಿದ್ದರು. ಆದರೆ,ಈ ವರ್ಷ ರಾಜಸ್ಥಾನ ಪರ ಅವರ ಬೌಲಿಂಗ್‌ನಲ್ಲಿ ನಿಖರತೆ ಕಂಡುಬಂದಿಲ್ಲ. ಎಲ್ಲ 7 ಪಂದ್ಯಗಳನ್ನು ಆಡಿರುವ ಉನದ್ಕಟ್ ಕೇವಲ 4 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

►ಕಿರೊನ್ ಪೊಲಾರ್ಡ್(7 ಪಂದ್ಯಗಳು, 76 ರನ್) 2015ರ ಮೇ 24ರ ಬಳಿಕ ಪೊಲಾರ್ಡ್ ಐಪಿಎಲ್‌ನಲ್ಲಿ ಕೇವಲ 7.5 ಓವರ್ ಬೌಲಿಂಗ್ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಪೊಲಾರ್ಡ್‌ರನ್ನು ಕೇವಲ ಬ್ಯಾಟ್ಸ್‌ಮನ್ ಆಗಿ ಮಾತ್ರ ಆಡಿಸಿತ್ತು. ಈ ಬಾರಿ 5.40 ಕೋ.ರೂ.ಗೆ ರೈಟ್ ಟು ಮ್ಯಾಚ್ ಕಾರ್ಡ್ ಮೂಲಕ ಮುಂಬೈ ತಂಡಕ್ಕೆ ವಾಪಸಾಗಿರುವ ಪೊಲಾರ್ಡ್ ಈ ತನಕ 28,0,5,ಔಟಾಗದೆ 21,9 ಹಾಗೂ 13 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್‌ರೇಟ್ ಕೇವಲ 108.57.

►ಆ್ಯರೊನ್ ಫಿಂಚ್(6 ಪಂದ್ಯಗಳು, 24 ರನ್) ಆಸ್ಟ್ರೇಲಿಯದ ಸೀಮಿತ ಓವರ್ ಕ್ರಿಕೆಟ್‌ನ ಆರಂಭಿಕ ಆಟಗಾರನಾಗಿರುವ ಫಿಂಚ್ 1.5 ಕೋ.ರೂ. ಮೂಲ ಬೆಲೆ ಹೊಂದಿದ್ದರು. ಅಂತಿಮವಾಗಿ 6.2 ಕೋ.ರೂ.ಗೆ ಪಂಜಾಬ್ ತಂಡಕ್ಕೆ ಹರಾಜಾಗಿದ್ದರು.ಎರಡು ಬಾರಿ ಶೂನ್ಯಕ್ಕೆ ಔಟಾಗಿ ಈ ವರ್ಷದ ಐಪಿಎಲ್ ಅಭಿಯಾನ ಆರಂಭಿಸಿದ ಫಿಂಚ್ ಆನಂತರ 6 ಎಸೆತಗಳಲ್ಲಿ 14 ರನ್ ಗಳಿಸಿದ್ದರು. ಫಿಂಚ್ ಪಂಜಾಬ್ ಬ್ಯಾಟಿಂಗ್ ವಿಭಾಗದಲ್ಲಿ ಖಾಯಂ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಆರಂಭಿಕ ಆಟಗಾರನಾಗಿದ್ದರೂ 3 ಹಾಗೂ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News