ಭೀಮ್ ಆ್ಯಪ್‌ನಲ್ಲಿ ಕೇವಲ ಒಂದು ರೂ.ವಹಿವಾಟು ನಡೆಸಿ 51ರೂ.ಕ್ಯಾಷ್‌ಬ್ಯಾಕ್ ಪಡೆಯುವುದು ಹೇಗೆ....?

Update: 2018-05-03 11:27 GMT

ನಗದುರಹಿತ ವಹಿವಾಟುಗಳನ್ನು ಉತ್ತೇಜಿಸಲು ಸರಕಾರವು ಬಿಡುಗಡೆಗೊಳಿಸಿರುವ ಭೀಮ್ ಆ್ಯಪ್‌ನಲ್ಲಿ ಕೇವಲ ಒಂದು ರೂ.ವಹಿವಾಟು ನಡೆಸಿಯೂ 51 ರೂ.ಗಳ ಕ್ಯಾಷ್‌ಬ್ಯಾಕ್ ಪಡೆಯಲು ಈಗ ಸಾಧ್ಯ. ಈ ಆ್ಯಪ್ ಗ್ರಾಹಕರಿಗಾಗಿ ಹೊಸ ಕ್ಯಾಷ್‌ಬ್ಯಾಕ್ ಯೋಜನೆಯನ್ನು ಪರಿಚಯಿಸಿದ್ದು,ಬಳಕೆದಾರರು ತಿಂಗಳಿಗೆ 750 ರೂ.ವರೆಗೂ ಕ್ಯಾಷ್‌ಬ್ಯಾಕ್ ಪಡೆಯಬಹುದಾಗಿದೆ. ಈ ಯೋಜನೆಯು ಹೊಸದಾಗಿ ಭೀಮ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವವರಿಗೆ ಸೀಮಿತವಾಗಿದೆ. ಹಾಗೆಂದು ಆ್ಯಪ್‌ನ್ನು ರೀ-ಇನ್‌ಸ್ಟಾಲ್ ಮಾಡಿಕೊಂಡರೆ ಹೊಸ ಭೀಮ್ ಬಳಕೆದಾರರಾಗುವುದಿಲ್ಲ ಎನ್ನುವುದು ನೆನಪಿರಲಿ. ಆಸಕ್ತಿಯ ವಿಷಯವೆಂದರೆ ಕ್ಯಾಷ್‌ಬ್ಯಾಕ್ ಪಡೆಯಲು ಕನಿಷ್ಠ ಮಿತಿಯನ್ನು ಹೇರಲಾಗಿಲ್ಲ. ಮೊದಲ ವಹಿವಾಟನ್ನು,ಅದು ಕೇವಲ ಒಂದು ರೂ.ನದ್ದಾದರೂ ಸರಿ,ಪೂರ್ಣಗೊಳಿಸಿದರೆ 51 ರೂ.ಗಳ ಕ್ಯಾಷ್‌ಬ್ಯಾಕ್ ದೊರೆಯುತ್ತದೆ. ಭೀಮ್ ಮತ್ತು ಬ್ಯಾಂಕ್ ಯುಪಿಐ ಆ್ಯಪ್ ಗಳಿಗಾಗಿರುವ ವಿಶಿಷ್ಟ ವಹಿವಾಟು ಯೋಜನೆಯಡಿ ಮುಂದಿನ ಗರಿಷ್ಠ 20 ವಹಿವಾಟುಗಳಿಗೆ(ಒಂದು ತಿಂಗಳ ಅವಧಿಯಲ್ಲಿ),ಪ್ರತಿ ವಹಿವಾಟು ಕನಿಷ್ಠ 100 ರೂ.ಗಳಾಗಿದ್ದರೆ ಮತ್ತು ಪ್ರತಿ ಬಾರಿಯೂ ಹೊಸ ವ್ಯಕ್ತಿಯೊಂದಿಗೆ ವಹಿವಾಟು ನಡೆಸಿದ್ದರೆ ಪ್ರತಿ ವಹಿವಾಟಿಗೂ 25 ರೂ.ಗಳಂತೆ ಗರಿಷ್ಠ 500 ರೂ.ಕ್ಯಾಷ್‌ಬ್ಯಾಕ್ ಲಭಿಸುತ್ತದೆ.

ವಹಿವಾಟುಗಳ ಒಟ್ಟು ಸಂಖ್ಯೆ ತಿಂಗಳಿಗೆ 25-49ರ ನಡುವೆ ಇದ್ದರೆ 200ರೂ.ಕ್ಯಾಷ್‌ಬ್ಯಾಕ್,50-99ರ ನಡುವೆಯಿದ್ದರೆ 200 ರೂ.ಕ್ಯಾಷ್‌ಬ್ಯಾಕ್ ಮತ್ತು 100ಕ್ಕಿಂತ ಹೆಚ್ಚಿದ್ದರೆ 250 ರೂ.ಗಳ ಕ್ಯಾಷ್‌ಬ್ಯಾಕ್ ದೊರೆಯುತ್ತದೆ. ಅಂದರೆ ವಿಶಿಷ್ಟ ವಹಿವಾಟು ಯೋಜನೆಯೂ ಸೇರಿದಂತೆ ಗ್ರಾಹಕರು ತಿಂಗಳಿಗೆ ಗರಿಷ್ಠ 750 ರೂ.ಗಳ ಕ್ಯಾಷ್‌ಬ್ಯಾಕ್ ಲಾಭವನ್ನು ಪಡೆಯಬಹುದಾಗಿದೆ. ವಿಶಿಷ್ಟ ವಹಿವಾಟು ಯೋಜನೆ ಹೊರತುಪಡಿಸಿ ಉಳಿದ ವಹಿವಾಟುಗಳು ಕನಿಷ್ಠ 10 ರೂ.ದ್ದಾಗಿರಬೇಕು.

ವಹಿವಾಟುಗಳು ಯಾವುದೇ ವಿಪಿಎ(ವರ್ಚುವಲ್ ಪೇಮೆಂಟ್ ಅಡ್ರೆಸ್)/ಯುಪಿಐ ಐಡಿ,ಬ್ಯಾಂಕ್‌ಖಾತೆ....ಅಷ್ಟೇ ಏಕೆ,ಮೊಬೈಲ್ ಸಂಖ್ಯೆಗೂ ಆಗಿರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News