ಫ್ಲೈ ಓವರ್ ನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ

Update: 2018-05-03 11:42 GMT

ತಿರುನೆಲ್ವೇಲಿ,ಮೇ.3 : ನಗರದ ವನ್ನರಪೆಟ್ಟೈ ಎಂಬಲ್ಲಿರುವ ಫ್ಲೈ ಓವರ್ ನಲ್ಲಿ 17 ವರ್ಷದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆಯಿಂದ ಇಡೀ ನಗರವೇ ಆಘಾತಕ್ಕೀಡಾಗಿದೆ. ಬಾಲಕ ನಮಕ್ಕಲ್ ಎಂಬಲ್ಲಿನ ಶಾಲೆಯೊಂದರ 12ನೇ ತರಗತಿ ವಿದ್ಯಾರ್ಥಿಯಾಗಿದ್ದು ಇತ್ತೀಚೆಗೆ ಪರೀಕ್ಷೆಗೆ ಹಾಜರಾಗಿದ್ದನಲ್ಲದೆ ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಆತನ ಕಿಸೆಯಲ್ಲಿ ಪತ್ತೆಯಾದ ಸುಸೈಡ್ ನೋಟ್ ನಲ್ಲಿ ತನ್ನ ತಂದೆಯ ವಿಪರೀತ ಮದ್ಯಪಾನದಿಂದ ಬೇಸತ್ತು  ಆತ್ಮಹತ್ಯೆಗೈಯ್ಯುತ್ತಿರುವುದಾಗಿ ಬರೆದಿದ್ದಾನಲ್ಲದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಇ.ಪಳನಿಸ್ವಾಮಿ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕೆಂದು ಮನವಿ ಮಾಡಿದ್ದಾನೆ.

ಅಷ್ಟೇ ಅಲ್ಲದೆ ತನ್ನ ಅಂತ್ಯಕ್ರಿಯೆಯನ್ನು ತನ್ನ ತಂದೆಗೆ ನಡೆಸಲು ಅನುಮತಿಸಬಾರದೆಂದೂ ಆತ ವಿನಂತಿಸಿದ್ದಾನಲ್ಲದೆ ಕುಟುಂಬದ ಇನ್ನೊಬ್ಬ ಸದಸ್ಯ ಈ ಕಾರ್ಯ ನೆರವೇರಿಸಬೇಕೆಂದು ಕೋರಿದ್ದಾನೆ.

ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಬೇಕೆಂಬ ಪ್ರಸ್ತಾಪ 2015ರಲ್ಲಿ ಜಯಲಲಿತಾ ಆಡಳಿತದ ಸಂದರ್ಭ ಇತ್ತಾದರೂ ಈ ನಿಟ್ಟಿನಲ್ಲಿ ಯಾವುದೇ ಹೆಚ್ಚಿನ ಪ್ರಗತಿ ಸಾಧಿಸಲಾಗಿರಲಿಲ್ಲ. ಜಯಲಲಿತಾ ಸಾವಿನ ನಂತರ  ಇ ಪಳನಿಸ್ವಾಮಿ ಸರಕಾರ ಕಳೆದ ವರ್ಷದ ಫೆಬ್ರವರಿಯಲ್ಲಿ 500 ಮದ್ಯದಂಗಡಿಗಳನ್ನು ಮುಚ್ಚಿತ್ತಾದರೂ ಬೇರಿನ್ನೇನೂ ಕ್ರಮ ಕೈಗೊಂಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News