ಆಧಾರ್ ನಿಂದ ಖಾಸಗಿತನಕ್ಕೆ ಸಮಸ್ಯೆಯಿಲ್ಲ: ಬಿಲ್ ಗೇಟ್ಸ್

Update: 2018-05-03 12:05 GMT

ವಾಷಿಂಗ್ಟನ್,ಮೇ.3 : ಭಾರತದ ಆಧಾರ್ ತಂತ್ರಜ್ಞಾನ ಯಾವುದೇ ಖಾಸಗಿತನದ ಸಮಸ್ಯೆಯನ್ನು ತಂದೊಡ್ಡುವುದಿಲ್ಲ ಎಂದು ಹೇಳಿರುವ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್, ತನ್ನ ವಿಶ್ವ ಬ್ಯಾಂಕ್ ಪ್ರಾಯೋಜಿತ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನವು ಈ ವಿಧಾನವನ್ನು ಇನ್ನಷ್ಟು ದೇಶಗಳಿಗೆ ತಲುಪಿಸಲು ಯತ್ನಿಸಲಿದೆ ಎಂದಿದ್ದಾರೆ.

ಆಧಾರ್ ರೂವಾರಿಯೆಂದೇ ಹೇಳಲಾದ ಇನ್ಫೋಸಿಸ್ ಸಂಸ್ಥೆಯ ನಂದನ್ ನೀಲೇಕಣಿ ಅವರು ಈ ನಿಟ್ಟಿನಲ್ಲಿ ಸಲಹೆ ನೀಡುತ್ತಿದ್ದಾರಲ್ಲದೆ ವಿಶ್ವ ಬ್ಯಾಂಕ್ ಗೆ ಸಹಾಯ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಆಧಾರ್ ಗುರುತು ಪತ್ರದಿಂದ ಅಗಾಧ ಲಾಭಗಳಿವೆ, ಆಡಳಿತದ ಗುಣಮಟ್ಟವು ಒಂದು  ದೇಶದ ಆರ್ಥಿಕ ಪ್ರಗತಿಗೆ ಹಾಗೂ ಜನರ ಸಬಲೀಕರಣಕ್ಕೆ ಸಹಕಾರಿ, ಆಧಾರ್ ನಂತಹುದೇ ಯೋಜನೆಯನ್ನು ಇತರ ದೇಶಗಳಿಗೂ ವಿಸ್ತರಿಸಲು ನಾವು ವಿಶ್ವ ಬ್ಯಾಂಕ್ ಗೆ ಧನಸಹಾಯ ಮಾಡಿದ್ದೇವೆ ಎಂದೂ ಅವರು ಹೇಳಿದರು.

ಆಧಾರ್ ನಲ್ಲಿನ ಮಾಹಿತಿಯನ್ನು ಎಲ್ಲಿ ಸಂಗ್ರಹಿಸಿಡಲಾಗುತ್ತದೆ ಹಾಗೂ ಅದನ್ನು ಯಾರು ಉಪಯೋಗಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂದು ಬಿಲ್ ಗೇಟ್ಸ್ ಹೇಳಿದರು.

ಮೋದಿ ಪ್ರಧಾನಿಯಾಗುವ ಮುಂಚೆಯೇ ಆಧಾರ್ ಜಾರಿಗೊಳಿಸಲಾಗಿತ್ತು ಎಂದು ಸ್ಮರಿಸಿದ ಅವರು ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋದ ಶ್ರೇಯಸ್ಸಿಗೆ ಅವರು ಪಾತ್ರರಾಗಿದ್ದಾರೆ, ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News