ಗಾಂಧೀಜಿ 150ನೇ ಜನ್ಮದಿನಾಚರಣೆ ಕುರಿತ ಸಭೆಗೆ ಸೋನಿಯಾ, ರಾಹುಲ್, ಸಿಐಜೆ ಮಿಶ್ರಾ ಗೈರು

Update: 2018-05-03 18:20 GMT

ಹೊಸದಿಲ್ಲಿ, ಮೇ 3: ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನವನ್ನು ಆಚರಿಸುವ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಸಮಿತಿಯ ಪ್ರಥಮ ಸಭೆಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಭಾರತದ ಮುಖ್ಯನ್ಯಾಯಾಧೀಶ (ಸಿಐಜೆ) ದೀಪಕ್ ಮಿಶ್ರಾ ಗೈರುಹಾಜರಾಗಿದ್ದರು.

 ರಾಷ್ಟ್ರೀಯ ಸಮಿತಿಯ ಅಧ್ಯಕ್ಷ, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಸಭೆಯಲ್ಲಿ ವಿಪಕ್ಷಗಳ ನಾಯಕ ಗುಲಾಂ ನಬಿ ಆಝಾದ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಹಾಗೂ 23 ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಈ ವರ್ಷದ ಅಕ್ಟೋಬರ್ 2ರಂದು ಕಾರ್ಯಕ್ರಮಗಳು ಆರಂಭವಾಗಲಿದ್ದು 2020ರ ಅಕ್ಟೋಬರ್ 2ರವರೆಗೆ ನಡೆಯಲಿದೆ. ಗಾಂಧೀಜಿ ಭಾರತದ ಆತ್ಮಸಾಕ್ಷಿಯ ರಕ್ಷಕರಾಗಿದ್ದಾರೆ. ಅವರು ನಮ್ಮ ಗತಕಾಲದ ಹೆಗ್ಗುರುತಾಗಿದ್ದಾರೆ. ಈಗಲೂ ಗಾಂಧೀಜಿ ಪ್ರಸ್ತುತ ಹಾಗೂ ಭವಿಷ್ಯದಲ್ಲೂ ಕೂಡಾ ಎಂದು ಎಂದು ಕೋವಿಂದ್ ಹೇಳಿದರು.

ಈ ಸಂದರ್ಭ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗಾಂಧೀಜಿಯವರ ಜನ್ಮದಿನಾಚರಣೆಯನ್ನು ಕ್ರಿಯಾತ್ಮಕವಾಗಿ ಆಚರಿಸಬೇಕು. ನೆಪ ಮಾತ್ರದ ಆಚರಣೆಯಾಗಬಾರದು ಎಂದರು. ಮಹಾನ್ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರಷ್ಟೇ ಸಾಲದು, ಅವರು ಹಾಕಿಕೊಟ್ಟ ಆದರ್ಶಗಳನ್ನು ಜನತೆಯ ಮುಂದಿಡುವ ಕಾರ್ಯವಾಗಬೇಕು . ಗಾಂಧೀಜಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ್ದಾರೆ. ಗಾಂಧೀಜಿಯವರ ಚಳವಳಿಯಿಂದ ಇಂದಿನ ಜನಾಂಗವಾದ ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಬದುಕಲು ಸಾಧ್ಯವಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಸಭೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಮುಖಂಡ ಆಝಾದ್ ಮಾತನಾಡಿ, ಶಾಲೆಗಳಲ್ಲಿ ಅಹಿಂಸೆಯ ಬಗ್ಗೆ ಪಠ್ಯಕ್ರಮವನ್ನು ಸೇರಿಸಬೇಕು ಹಾಗೂ ನಿರ್ಭೀತ ಪತ್ರಿಕೋದ್ಯಮಕ್ಕಾಗಿ ಪುರಸ್ಕಾರ ನೀಡಬೇಕೆಂಬ ಸಲಹೆಯನ್ನು ಮುಂದಿಟ್ಟರು. ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿ, ವಿಶ್ವದ 193 ದೇಶಗಳಲ್ಲಿ ಗಾಂಧೀಜಿ ಜನ್ಮದಿನದ ಕಾರ್ಯಕ್ರಮವನ್ನು ಆಚರಿಸಲು ಯೋಜನೆ ರೂಪಿಸಲಾಗಿದೆ ಎಂದರು. ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ವರ್ಷವನ್ನು ‘ಶಾಂತಿ ಮತ್ತು ಸಮನ್ವಯದ ವರ್ಷ’ ಎಂದು ಆಚರಿಸುವಂತೆ ಹಾಗೂ ಇಂಟರ್‌ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಅಹಿಂಸೆಯ ಮಾರ್ಗದ ಬಗ್ಗೆ ಯುವಜನರಲ್ಲಿ ತಿಳುವಳಿಕೆ ಮೂಡಿಸಬೇಕೆಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದರು. ಜನ್ಮದಿನಾಚರಣೆಯ ಪ್ರಯುಕ್ತ ಕೋಲ್ಕತಾದಲ್ಲಿ ವಿಶ್ವ ಶಾಂತಿ ಸಮ್ಮೇಳನ ಆಯೋಜಿಸಬೇಕೆಂದು ಪ.ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News