×
Ad

ಎರಡು ತಿಂಗಳಲ್ಲಿ ದೇವಸ್ಥಾನವಾಗಿ ಬದಲಾದ ಗೋರಿ!

Update: 2018-05-04 22:26 IST

ಹೊಸದಿಲ್ಲಿ,ಮೇ 4: ಕಳೆದ ಮಾರ್ಚ್‌ವರೆಗೂ ಅದು ಅಪರಿಚಿತ ವ್ಯಕ್ತಿಯ ಗೋರಿಯಾಗಿತ್ತು. ನಂತರ ಬಿಳಿ ಮತ್ತು ಕೇಸರಿ ಬಣ್ಣಗಳ ಅಲಂಕರಣದೊಂದಿಗೆ ಶಿವ ಭೋಲಾ ಮಂದಿರವಾಗಿ ರೂಪಾಂತರಗೊಂಡಿದ್ದು,ಒಳಗಡೆ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.

ದಿಲ್ಲಿಯ ಸಪ್ದರ್‌ಜಂಗ್ ಎನ್‌ಕ್ಲೇವ್‌ನ ಹುಮಾಯೂನಪುರ ಗ್ರಾಮದಲ್ಲಿರುವ ಗುಮ್ಟಿ ಎಂದು ಕರೆಯಲಾಗುವ ಗುಮ್ಮಟ ಸಹಿತ ಗೋರಿಯ ಕಟ್ಟಡದಲ್ಲಾಗಿರುವ ಬದಲಾವಣೆಗಳು ಇತ್ತೀಚಿಗೆ ಬೆಳಕಿಗೆ ಬಂದಿವೆ. ಆದರೆ 2017ರಲ್ಲಿ ತೆಗೆಯಲಾಗಿದ್ದ ಗುಮ್ಟಿಯ ಚಿತ್ರಗಳಲ್ಲಿ ಅದರ ನಾಲ್ಕು ಪ್ರವೇಶ ದ್ವಾರಗಳಲ್ಲಿ ಹಿಂದು ದೇವತೆಗಳ ಟೈಲ್‌ಗಳನ್ನು ಅಳವಡಿಸಲಾಗಿದ್ದು,ಇದು ಕೆಲವು ಸಮಯದಿಂದಲೇ ಬದಲಾವಣೆ ಕಾರ್ಯ ನಡೆಯುತ್ತಿತ್ತು ಎನ್ನುವುದನ್ನು ಸೂಚಿಸುತ್ತಿದೆ.

ಈ ಸ್ಥಳದಲ್ಲಿ ಯಾರನ್ನು ದಫನ್ ಮಾಡಲಾಗಿತ್ತು ಅಥವಾ ಗೋರಿಯನ್ನು ಯಾರು ನಿರ್ಮಿಸಿದ್ದರು ಎನ್ನುವುದು ಖಚಿತವಿಲ್ಲವಾದರೂ,ಅದರ ವಾಸ್ತುಶಿಲ್ಪವು... ಗುಮ್ಮಟದ ಚೂಪಾದ ತುದಿ ಮತ್ತು ಮಿಹ್‌ರಾಬ್‌ನ ಅನುಪಸ್ಥಿತಿ ಅದು ತುಘಲಕ್‌ನ ಆಡಳಿತದ ಕೊನೆಯ ಭಾಗದಲ್ಲಿ ಅಥವಾ ಲೋದಿ ಅರಸೊತ್ತಿಗೆಯ ಆರಂಭದ ದಿನಗಳಲ್ಲಿ ನಿರ್ಮಾಣಗೊಂಡಿರಬಹುದು ಎನ್ನುವುದನ್ನು ಬೆಟ್ಟುಮಾಡುತ್ತಿದೆ.

ದಿಬ್ಬವೊಂದರ ಮೇಲೆ ನಿರ್ಮಾಣಗೊಂಡಿರುವ ಈ ಸರಕಾರಿ ಅಧಿಸೂಚಿತ ಸ್ಮಾರಕದಲ್ಲಿ ಮಾಡಲಾಗಿರುವ ಬದಲಾವಣೆಗಳು ಪುರಾತತ್ವ ಇಲಾಖೆಯ ನಿಯಮಾವಳಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ.

2010ರಲ್ಲಿ ಗುಮ್ಟಿಯನ್ನು 767 ಪರಂಪರಾ ತಾಣಗಳಲ್ಲೊಂದಾಗಿ ಅಧಿಸೂಚಿಸಲಾಗಿತ್ತು ಮತ್ತು ಗ್ರೇಡ್-1 ಪಟ್ಟಿಯಲ್ಲಿ ಸೇರಿಸಲಾಗಿತ್ತು. ನಾಲ್ಕು ವರ್ಷಗಳ ಬಳಿಕ 2014ರಲ್ಲಿ ಪುರಾತತ್ವ ಇಲಾಖೆಯು ಮತ್ತೊಮ್ಮೆ ಅದನ್ನು ಪರಂಪರಾ ತಾಣವೆಂದು ಅಧಿಸೂಚಿಸಿತ್ತು.

ತನಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ ಮತ್ತು ಈ ಬಗ್ಗೆ ವಿಚಾರಣೆ ನಡೆಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸುವುದಾಗಿ ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ ಸಿಸೋದಿಯಾ ಅವರು ಸುದ್ದಿಗಾರರಿಗೆ ತಿಳಿಸಿದರು.

ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರ್(ಇನ್‌ಟ್ಯಾಕ್)ನ ದಿಲ್ಲಿ ಘಟಕ ಮತ್ತು ಪುರಾತತ್ವ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ 15ನೇ ಶತಮಾನದ ಈ ಸ್ಮಾರಕದ ನವೀಕರಣ ಕಾರ್ಯ ಕಳೆದ ವರ್ಷ ನಡೆಯಬೇಕಿತ್ತು. ಆದರೆ ಸ್ಥಳೀಯರ ಪ್ರತಿರೋಧದಿಂದಾಗಿ ವಿಳಂಬವಾಗಿದೆ ಎಂದು ಇನ್‌ಟ್ಯಾಕ್ ದಿಲ್ಲಿಯ ಯೋಜನಾ ನಿರ್ದೇಶಕ ಅಜಯ ಕುಮಾರ ತಿಳಿಸಿದರು. ನಾವು ಪೊಲೀಸರೊಂದಿಗೆ ತೆರಳಿದ್ದೆವಾದರೂ ಯಶಸ್ವಿಯಾಗಿರಲಿಲ್ಲ. ಆ ಸ್ಥಳವೀಗ ದೇವಸ್ಥಾನವಾಗಿದೆ ಮತ್ತು ಸ್ಮಾರಕವೊಂದನ್ನು ನಾವು ಕಳೆದುಕೊಂಡಿದ್ದೇವೆ ಎಂದರು.

ಇದೊಂದು ‘ಭೂ ಕಬಳಿಕೆ ಪ್ರಕರಣ’ ಎಂದು ಹೇಳಿದ ಇನ್‌ಟ್ಯಾಕ್ ದಿಲ್ಲಿಯ ಸಂಚಾಲಕಿ ಸ್ವಪ್ನಾ ಲಿಡ್ಲೆ ಅವರು,ಸರಕಾರವು ಸ್ಮಾರಕವನ್ನು ರಕ್ಷಿಸಿ ನಮಗೆ ಹಸ್ತಾಂತರಿಸಿದರೆ ನಾವು ಅದನ್ನು ಪುನರುಜ್ಜೀವನಗೊಳಿಸುತ್ತೇವೆ ಎಂದರು.

ಕಟ್ಟಡದ ಆವರಣದಲ್ಲಿರುವ ಎರಡು ಕೇಸರಿ ಬಣ್ಣದ ಬೆಂಚುಗಳ ಮೇಲೆ ಸಪ್ದರ್‌ಜಂಗ್ ಎನ್‌ಕ್ಲೇವ್‌ನ ಬಿಜೆಪಿ ಕೌನ್ಸಿಲರ ರಾಧಿಕಾ ಫೋಗಟ್ ಅವರ ಹೆಸರಿದೆಯಾದರೂ ವಿಷಯ ತನಗೆ ಗೊತ್ತಿತ್ತು ಎನ್ನುವುದನ್ನು ಅವರು ನಿರಾಕರಿಸಿದ್ದಾರೆ. ತನಗೆ ಗೊತ್ತಿಲ್ಲದೆ ತನ್ನ ಒಪ್ಪಿಗೆ ಅಥವಾ ಬೆಂಬಲವಿಲ್ಲದೆ ಈ ಕಟ್ಟಡವು ದೇವಸ್ಥಾನವಾಗಿದೆ. ಹಿಂದಿನ ಬಿಜೆಪಿ ಕೌನ್ಸಿಲರ್ ಶಾಮೀಲಾತಿಯೊಂದಿಗೆ ಈ ಕೆಲಸ ನಡೆದಿದೆ. ತಾನು ಅದನ್ನು ಆಕ್ಷೇಪಿಸಿದ್ದೆ. ಆದರೆ ಇದು ಸೂಕ್ಷ್ಮ ವಿಷಯವಾಗಿದೆ. ದೇಶದಲ್ಲಿ ಏನೇ ನಡೆಯುತ್ತಿರಲಿ,ಆದರೆ ದೇವಸ್ಥಾನಕ್ಕೆ ಯಾರೂ ಕೈಹಚ್ಚುವಂತಿಲ್ಲ. ತನ್ನ ಹೆಸರಿರುವ ಬೆಂಚುಗಳು ಮೊದಲು ಸಮೀಪದ ಪಾರ್ಕ್‌ನಲ್ಲಿದ್ದವು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News