ದಿಲ್ಲಿ: ಸೈಂಟ್ ಸ್ಟೀಫನ್ಸ್ ಕಾಲೇಜ್‌ನ ಚಾಪೆಲ್‌ನಲ್ಲಿ ದುಷ್ಕರ್ಮಿಗಳಿಂದ ಕೋಮುದ್ವೇಷದ ಬರಹ
ದಿಲ್ಲಿ, ಮೇ 5: ದಿಲ್ಲಿಯ ವಿವಿಗೆ ಸೇರಿದ ಪ್ರತಿಷ್ಠಿತ ಸೈಂಟ್ ಸ್ಟೀಫನ್ಸ್ ಕಾಲೇಜ್‌ನ ಆವರಣದಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರ (ಚಾಪೆಲ್)ದ ಬಾಗಿಲಿನ ಮೇಲೆ ಕೋಮು ಪ್ರಚೋದನಕಾರಿ ಬರಹಗಳನ್ನು ದುಷ್ಕರ್ಮಿಗಳು ಬರೆದಿರುವುದು ಶುಕ್ರವಾರ ಕಂಡುಬಂದಿದೆ.
ಚಾಪೆಲ್‌ನ ಮುಖ್ಯ ಬಾಗಿಲಿನ ಮೇಲೆ ದುಷ್ಕರ್ಮಿಗಳು ‘ಮಂದಿರ್ ವಹೀ ಬನಾಯೆಂಗೆ’ ಎಂಬಿತ್ಯಾದಿ ಪ್ರಚೋದನಕಾರಿ ಬರಹಗಳನ್ನು ಬರೆದಿದ್ದಾರೆ ಹಾಗೂ ಚಾಪೆಲ್‌ನ ಹಿಂಭಾಗದಲ್ಲಿರುವ ಶಿಲುಬೆಯ ಮೇಲೆ ‘ಓಂ’ ಸಂಕೇತದ ಜೊತೆಗೆ ‘ನಾನು ನರಕಕ್ಕೆ ಹೋಗುತ್ತಿದ್ದೇನೆ’ ಎಂಬ ಪದಗಳನ್ನು ಗೀಚಲಾಗಿದೆ ಎಂದು ಸೈಂಟ್ ಸ್ಟೀಫನ್ಸ್ ಕಾಲೇಜ್‌ನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಾಯಿ ಆಶೀರ್ವಾದ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರಾಂಶುಪಾಲ ಜಾನ್ ವರ್ಗೀಸ್ ಪ್ರತಿಕ್ರಿಯೆಗೆ ಲಭ್ಯರಿಲ್ಲವೆಂದು ತಿಳಿದುಬಂದಿದೆ.
ಆದಾಗ್ಯೂ, ಶನಿವಾರ ಈ ಬರಹಗಳನ್ನು ಅಳಿಸಿಹಾಕಲಾಗಿದೆಯೆಂದು ಅವರು ಹೇಳಿದ್ದಾರೆ. ಕಾಲೇಜಿನ ಆಡಳಿತವು ಪರೀಕ್ಷಾ ಪೂರ್ವ ಸಿದ್ಥತೆಗಾಗಿ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿತ್ತು. ಪ್ರಾಕ್ಟಿಕಲ್ ಪರೀಕ್ಷೆಗಳಿಗೆ ಹಾಜರಾಗುವವರು ಮಾತ್ರವೇ ಕಾಲೇಜ್‌ಗೆ ಆಗಮಿಸಿದ್ದರು.