ಅಫ್ಘಾನ್ ನಲ್ಲಿ 7 ಭಾರತೀಯರನ್ನು ಅಪಹರಿಸಿದ ಉಗ್ರರು
ಕಾಬೂಲ್ (ಅಫ್ಘಾನಿಸ್ತಾನ), ಮೇ 6: ಅಫ್ಘಾನಿಸ್ತಾನದ ಬಾಗ್ಲನ್ ಪ್ರಾಂತದಲ್ಲಿನ ವಿದ್ಯುತ್ ಸ್ಥಾವರವೊಂದರಲ್ಲಿ ಕೆಲಸ ಮಾಡುತ್ತಿದ್ದ ಏಳು ಭಾರತೀಯ ಇಂಜಿನಿಯರ್ ಮತ್ತು ಓರ್ವ ಅಫ್ಘಾನ್ ರಾಷ್ಟ್ರೀಯನನ್ನು ರವಿವಾರ ಅಪಹರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಂಜಿನಿಯರ್‌ಗಳು ಮಿನಿ ಬಸ್ಸೊಂದರಲ್ಲಿ ವಿದ್ಯುತ್ ಸ್ಥಾವರಕ್ಕೆ ಹೋಗುತ್ತಿದ್ದಾಗ ಅಜ್ಞಾತ ಬಂದೂಕುಧಾರಿಗಳು ಅವರನ್ನು ಮತ್ತು ಅವರ ಅಫ್ಘಾನ್ ಚಾಲಕನನ್ನು ಅಪಹರಿಸಿದ್ದಾರೆ ಎಂದು ಬಾಗ್ಲನ್ ಪೊಲೀಸ್ ವಕ್ತಾರ ಝಬಿಯುಲ್ಲಾ ಶುಜ ತಿಳಿಸಿದರು.
ಇಂಜಿನಿಯರ್‌ಗಳು ಡಾ ಅಫ್ಘಾನಿಸ್ತಾನ ಬ್ರೆಶ್ನಾ ಶೆರ್ಕಟ್ (ಡಿಎಬಿಎಸ್)ಗಾಗಿ ಕೆಲಸ ಮಾಡುತ್ತಿದ್ದರು. ಈ ಸಂಸ್ಥೆಯು ವಿದ್ಯುತ್ ಉತ್ಪಾದಿಸುವ ಸ್ಥಾವರಗಳನ್ನು ನಡೆಸುತ್ತಿದೆ.
‘‘ಅಫ್ಘಾನಿಸ್ತಾನದಲ್ಲಿ ಭಾರತೀಯ ರಾಷ್ಟ್ರೀಯರ ಅಪಹರಣವಾಗಿರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದೆ. ಅಫ್ಘಾನ್ ಅಧಿಕಾರಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಹಾಗೂ ಹೆಚ್ಚಿನ ಮಾಹಿತಿಗಳನ್ನು ಪಡೆಯುತ್ತಿದ್ದೇವೆ’’ ಎಂದು ಭಾರತೀಯ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು.
150ಕ್ಕೂ ಅಧಿಕ ಭಾರತೀಯ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಪರಿಣತರು ಅಫ್ಘಾನಿಸ್ತಾನದಾದ್ಯಂತ ಬೃಹತ್ ಮೂಲಸೌಕರ್ಯ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಭಾರತೀಯ ಇಂಜಿನಿಯರ್‌ಗಳನ್ನು ಅಪಹರಿಸಿದ್ದು ಯಾರು ಹಾಗೂ ಒತ್ತೆಹಣಕ್ಕಾಗಿ ಬೇಡಿಕೆ ಇಡಲಾಗಿದೆಯೇ ಎನ್ನುವುದು ಗೊತ್ತಾಗಿಲ್ಲ.
ಯಾವುದೇ ಗುಂಪು ಈವರೆಗೆ ಅಪಹರಣದ ಹೊಣೆಯನ್ನು ಹೊತ್ತಿಲ್ಲ.
2016ರಲ್ಲಿ ಭಾರತೀಯ ನೆರವು ಕಾರ್ಯಕರ್ತೆಯೊಬ್ಬರನ್ನು ಕಾಬೂಲ್‌ನಿಂದ ಅಪಹರಿಸಲಾಗಿತ್ತು. ಬಳಿಕ ಆಕೆಯನ್ನು 40 ದಿನಗಳ ಬಳಿಕ ಒತ್ತೆಹಣ ಕೊಟ್ಟು ಬಿಡಿಸಿಕೊಳ್ಳಲಾಗಿತ್ತು.