ಯುಪಿಎಸ್‌ಸಿ ಪರೀಕ್ಷೆ: ಅಗ್ರಸ್ಥಾನಿ ಪಡೆದ ಅಂಕ ಶೇ.55.6 !
ಹೊಸದಿಲ್ಲಿ, ಮೇ 6: ಯುಪಿಎಸ್‌ಸಿ ನಡೆಸಿದ 2017ರ ಸಿವಿಲ್ ಸರ್ವಿಸ್ ಪರೀಕ್ಷೆಯ ಅಂಕಪಟ್ಟಿ ಬಿಡುಗಡೆಯಾಗಿದ್ದು ಪ್ರಥಮ ರ್ಯಾಂಕ್ ವಿಜೇತ ದುರಿಶೆಟ್ಟಿ ಅನುದೀಪ್ ಶೇ.55.60 ಅಂಕ ಗಳಿಸಿರುವುದು ಈ ಪರೀಕ್ಷೆಯ ಗುಣಮಟ್ಟ ಎಷ್ಟು ಕಠಿಣವಾಗಿರುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಎರಡನೇ ರ್ಯಾಂಕ್ ಗಳಿಸಿರುವ ಅನು ಕುಮಾರಿ ಶೇ.55.50 ಅಂಕ ಗಳಿಸಿದ್ದರೆ, ತೃತೀಯ ರ್ಯಾಂಕ್ ವಿಜೇತ ಸಚಿನ್ ಗುಪ್ತ ಶೇ.55.40 ಅಂಕ ಗಳಿಸಿದ್ದಾರೆ. ಸಿವಿಲ್ ಸರ್ವಿಸ್‌ನ ‘ಮೆಯ್ನಾ’ ಪರೀಕ್ಷೆಯಲ್ಲಿ 1,750 ಅಂಕ ಹಾಗೂ ಸಂದರ್ಶನಕ್ಕೆ 275 ಅಂಕವಿದೆ. ಯುಪಿಎಸ್‌ಇ ಪ್ರತೀ ವರ್ಷ ನಡೆಸುವ ಸಿವಿಲ್ ಸರ್ವಿಸ್ ಪರೀಕ್ಷೆ - ಪ್ರಿಲಿಮಿನರಿ, ಮೆಯ್ನಿ ಹಾಗೂ ಇಂಟರ್‌ವ್ಯೆ ಎಂಬ ಮೂರು ಹಂತದಲ್ಲಿ ನಡೆಯುತ್ತದೆ.
2017ರ ಸಿವಿಲ್ ಪರೀಕ್ಷೆಗೆ 4,56,625 ಮಂದಿ ಹಾಜರಾಗಿದ್ದು ಇವರಲ್ಲಿ 13,366 ಅಭ್ಯರ್ಥಿಗಳು ‘ಮೆಯ್ನೆ’ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಇವರಲ್ಲಿ 2,568 ಅಭ್ಯರ್ಥಿಗಳು 2018ರ ಫೆಬ್ರವರಿಯಿಂದ ಎಪ್ರಿಲ್‌ವರೆಗೆ ನಡೆದ ವ್ಯಕ್ತಿತ್ವ ಪರೀಕ್ಷೆ ಮತ್ತು ಸಂದರ್ಶನಕ್ಕೆ ಅರ್ಹತೆ ಗಳಿಸಿದ್ದಾರೆ. ಎಪ್ರಿಲ್ 27ರಂದು ಸಿವಿಲ್ ಸರ್ವಿಸ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಅಂತಿಮವಾಗಿ 750 ಪುರುಷರು ಹಾಗೂ 240 ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 990 ಮಂದಿ ತೇರ್ಗಡೆಯಾಗಿದ್ದಾರೆ. 990ನೇ ರ್ಯಾಂಕ್ ಪಡೆದಿರುವ ಹಿಮಾಂಕ್ಷಿ ಭಾರದ್ವಾಜ್ ಶೇ.40.98 ಅಂಕ ಗಳಿಸಿದ್ದಾರೆ. 2016ರ ಯುಪಿಎಸ್‌ಸಿ ಪರೀಕ್ಷೆಯ ಟಾಪರ್ ಆಗಿದ್ದ ನಂದಿನಿ ಕೆ.ಆರ್. 55.3 ಶೇಕಡಾ ಅಂಕ ಪಡೆದಿದ್ದರೆ 2015ರ ಪರೀಕ್ಷೆಯ ಟಾಪರ್ ಟೀನಾ ದಾಬಿ ಶೇ.52.49 ಅಂಕ ಪಡೆದಿದ್ದರು.