×
Ad

ಹೆಣ್ಣುಮಕ್ಕಳನ್ನು ದತ್ತು ಪಡೆಯಲು ಭಾರತೀಯ ಪೋಷಕರ ಆದ್ಯತೆ

Update: 2018-05-06 20:25 IST

ಹೊಸದಿಲ್ಲಿ,ಮೇ 6: ಕಳೆದ ಆರು ವರ್ಷಗಳಲ್ಲಿ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ದತ್ತು ಪಡೆಯಲಾಗಿರುವ ಮಕ್ಕಳ ಪೈಕಿ ಶೇ.60ರಷ್ಟು ಬಾಲಕಿಯರಾಗಿದ್ದಾರೆ ಮತ್ತು ಈ ವಿಷಯದಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ದತ್ತು ಸ್ವೀಕಾರಗಳಿಗೂ ಆ ರಾಜ್ಯವು ಸಾಕ್ಷಿಯಾಗಿದೆ ಎಂದು ಸರಕಾರದ ದತ್ತಾಂಶಗಳು ಬೆಟ್ಟು ಮಾಡಿವೆ.

2017-18ನೇ ಸಾಲಿನಲ್ಲಿ ದೇಶದಲ್ಲಿ ದತ್ತು ಪಡೆಯಲಾಗಿರುವ 3,276 ಮಕ್ಕಳ ಪೈಕಿ 1,858 ಬಾಲಕಿಯರಿದ್ದಾರೆ. ಹೆಣ್ಣುಮಕ್ಕಳ ದತ್ತುಸ್ವೀಕಾರದಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. 2016-17ರಲ್ಲಿ ಅಲ್ಲಿ 642 ಮಕ್ಕಳನ್ನು ದತ್ತು ಪಡೆಯಲಾಗಿದ್ದು,ಈ ಪೈಕಿ ಬಾಲಕಿಯರ ಸಂಖ್ಯೆ 353 ಆಗಿದೆ ಎಂದು ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್‌ಎ)ವು 2012ರಿಂದ ಪ್ರತಿ ರಾಜ್ಯದಲ್ಲಿ ದತ್ತು ಪಡೆಯಲಾದ ಮಕ್ಕಳ ಸಂಖ್ಯೆ ಕುರಿತು ಆರ್‌ಟಿಐ ವಿಚಾರಣೆಯೊಂದಕ್ಕೆ ನೀಡಿರುವ ಉತ್ತರದಲ್ಲಿ ತಿಳಿಸಿದೆ.

286 ದತ್ತು ಸ್ವೀಕಾರಗಳೊಡನೆ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. 

ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ದತ್ತು ಸ್ವೀಕಾರಗಳು ನಡೆದಿರುವುದಕ್ಕೆ ಆ ರಾಜ್ಯವು ದೊಡ್ಡದಾಗಿದೆ ಎನ್ನುವುದು ಕಾರಣವಲ್ಲ,ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದತ್ತು ಕೇಂದ್ರಗಳಿರುವುದು ಕಾರಣ. ದೇಶದಲ್ಲಿಯೇ ಅತ್ಯಂತ ಹೆಚ್ಚಿನ(60) ದತ್ತುಕೇಂದ್ರಗಳು ಆ ರಾಜ್ಯದಲ್ಲಿದ್ದು,ಇತರ ದೊಡ್ಡರಾಜ್ಯಗಳು ಸರಾಸರಿ 20 ದತ್ತುಕೇಂದ್ರಗಳನ್ನು ಹೊಂದಿವೆ ಎಂದು ಸಿಎಆರ್‌ಎ ಸಿಇಒ ಲೆ.ಕ.ದೀಪಕ್ ಕುಮಾರ್ ತಿಳಿಸಿದ್ದಾರೆ.

2017-18ನೇ ಸಾಲಿನಲ್ಲಿ ದೇಶದೊಳಗೆ ದತ್ತು ಸ್ವೀಕಾರದಲ್ಲಿ ಏರಿಕೆಯಾಗಿದೆ. ದತ್ತು ಪಡೆಯಲಾದ ಒಟ್ಟು 3,276 ಮಕ್ಕಳಲ್ಲಿ 1,858 ಬಾಲಕಿಯರು ಮತ್ತು 1,418 ಬಾಲಕರಿದ್ದಾರೆ. ಇದೇ ವೇಳೆ ವಿದೇಶಿಯರಿಂದ ದತ್ತುಸ್ವೀಕಾರದಲ್ಲಿಯೂ ಏರಿಕೆಯಾಗಿದೆ. 2016-17ರಲ್ಲಿ ಇಂತಹ ಮಕ್ಕಳ ಸಂಖ್ಯೆ 578 ಆಗಿದ್ದರೆ,2017-18ರಲ್ಲಿ ಅದು 651ಕ್ಕೇರಿದೆ. ಹೆಚ್ಚಿನ ಮಕ್ಕಳನ್ನು ಬ್ರಿಟನ್,ಇಟಲಿ,ಫ್ರಾನ್ಸ್ ಮತ್ತು ಸ್ಪೇನ್ ದೇಶಗಳಲ್ಲಿಯ ಕುಟುಂಬಗಳು ದತ್ತು ಪಡೆದಿವೆ.

2016-17ರಲ್ಲಿ ಭಾರತದೊಳಗೆ ದತ್ತು ಪಡೆಯಲಾಗಿದ್ದ 3,210 ಮಕ್ಕಳ ಪೈಕಿ ಶೇ.60ರಷ್ಟು(1915) ಬಾಲಕಿಯರಾಗಿದ್ದರು. ಆ ವರ್ಷವೂ ಮಹಾರಾಷ್ಟ್ರ(711) ಮತ್ತು ಕರ್ನಾಟಕ(252) ಅಗ್ರಸ್ಥಾನಗಳಲ್ಲಿದ್ದು,ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳ(203) ಇತ್ತು ಎಂದು ಆರ್‌ಟಿಐ ಉತ್ತರವು ತಿಳಿಸಿದೆ.

ಕಳೆದ ಐದು ವರ್ಷಗಳಲ್ಲಿ ಸರಾಸರಿ ಶೇ. 59.77 ಕುಟುಂಬಗಳು ಹೆಣ್ಣುಮಕ್ಕಳನ್ನು ಮತ್ತು ಶೇ.40.23 ಕುಟುಂಬಗಳು ಗಂಡುಮಕ್ಕಳನ್ನು ದತ್ತು ಪಡೆದಿವೆ ಎನ್ನುವುದನ್ನು ದತ್ತಾಂಶಗಳು ತೋರಿಸಿವೆ.

ಈ ಪ್ರವೃತ್ತಿಯು ಪರಿಸ್ಥಿತಿ ಈಗ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತಿದೆ. ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳನ್ನು ಸಂಭಾಳಿಸುವುದು ಸುಲಭ ಎಂದು ಜನರು ಭಾವಿಸುತ್ತಿದ್ದಾರೆ ಮತ್ತು ಇದು ಹೆಣ್ಣುಮಕ್ಕಳ ದತ್ತುಸ್ವೀಕಾರಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡಿದೆ ಎಂದು ಕುಮಾರ್ ಹೇಳಿದ್ದಾರೆ.

ಹರ್ಯಾಣ ಮತ್ತು ಉತ್ತರ ಪ್ರದೇಶಗಳಂತಹ ಕಡಿಮೆ ಲಿಂಗಾನುಪಾತವಿರುವ ರಾಜ್ಯಗಳಲ್ಲಿಯೂ ಹೆಣ್ಣುಮಕ್ಕಳ ದತ್ತು ಸ್ವೀಕಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News