ಪಶ್ಚಿಮ ಬಂಗಾಳ ಗ್ರಾಮೀಣ ಚುನಾವಣೆ: 850 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ
ಕೊಲ್ಕತ್ತಾ, ಮೇ.6: ಮೇ 14ರಂದು ನಡೆಯಲಿರುವ ಪಶ್ಚಿಮ ಬಂಗಾಳದ ಗ್ರಾಮೀಣ ಚುನಾವಣೆಯಲ್ಲಿ ಬಿಜೆಪಿಯು ಈವರೆಗಿನ ಅತೀಹೆಚ್ಚು 850ಕ್ಕೂ ಅಧಿಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
2013ರ ಗ್ರಾಮೀಣ ಚುನಾವಣೆಯಲ್ಲಿ ಬಿಜೆಪಿ ಪಾಳಯದಿಂದ ನೂರಕ್ಕಿಂತಲೂ ಕಡಿಮೆ ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಾಮಪತ್ರ ಪ್ರಕ್ರಿಯೆಯು ಶಾಂತಿಯುತವಾಗಿ ನಡೆದಿದ್ದರೆ 2,000 ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ಚಿಂತಿಸಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷ ತನ್ನ ಸದಸ್ಯರ ಸಂಖ್ಯೆಯನ್ನು ಹಲವು ಪಟ್ಟು ವೃದ್ಧಿಗೊಳಿಸಿದೆ.
ಮುಸ್ಲಿಮರು ಕೂಡಾ ಬಿಜೆಪಿಯು ಎಲ್ಲರ ಅಭಿವೃದ್ಧಿಯ ಮೇಲೆ ನಂಬಿಕೆ ಹೊಂದಿದೆ ಎಂದು ತಿಳಿದುಕೊಂಡಿದ್ದಾರೆ. ಕೇಂದ್ರದಲ್ಲಿ ಮತ್ತು ಇಪ್ಪತ್ತಕ್ಕೂ ಅಧಿಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಎಲ್ಲ ಕಡೆಯೂ ಮುಸ್ಲಿಮರು ಶಾಂತಿಯಿಂದ ಜೀವನ ನಡೆಸುತ್ತಿದ್ದಾರೆ ಎಂದವರು ತಿಳಿಸಿದ್ದಾರೆ. ಅಭ್ಯರ್ಥಿಗಳ ಗೆಲುವಿನ ಸಾಮರ್ಥ್ಯದ ಆಧಾರದಲ್ಲಿ 2019ರ ಚುನಾವಣೆಯಲ್ಲೂ ಪಕ್ಷವು ಇದೇ ಮಾದರಿಯನ್ನು ಅನುಸರಿಸಲಿದೆ ಎಂದು ಘೋಷ್ ತಿಳಿಸಿದ್ದಾರೆ. ನಾವು ಜಾತಿ ಅಥವಾ ಧರ್ಮ ನೋಡಿ ಟಿಕೆಟ್ ನೀಡುವುದಿಲ್ಲ. ಬದಲಿಗೆ ಗೆಲುವಿನ ಸಾಮರ್ಥ್ಯವೊಂದೇ ನಮ್ಮ ಮಾನದಂಡವಾಗಿದೆ ಎಂದವರು ತಿಳಿಸಿದ್ದಾರೆ.
ಬಿಜೆಪಿಯ ಅಲ್ಪಸಂಖ್ಯಾತರ ಮೇಲಿನ ಒಲವನ್ನು ಟೀಕಿಸಿರುವ ತೃಣಮೂಲ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಇನ್ನೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದೆ. ಬಿಜೆಪಿಯು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಮೂಲಕ ಹಿಂಸಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಪಕ್ಷವು ದೂರಿದೆ. ಶೇ. 30 ಮುಸ್ಲಿಂ ಜನಸಂಖ್ಯೆಯಿರುವ ಪಶ್ಚಿಮ ಬಂಗಾಳದಂಥ ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚು ಟಿಕೆಟ್‌ಗಳನ್ನು ನೀಡುವುದು ಸಾಮಾನ್ಯ ವಿಷಯ. ಮುಸ್ಲಿಂ ಸಮುದಾಯ ಕೂಡಾ ಟಿಎಂಸಿ ಬಿಂಬಿಸಿರುವಂತೆ ಬಿಜೆಪಿ ತನ್ನ ಶತ್ರುವಲ್ಲ ಎಂಬುದನ್ನು ಮನಗಂಡಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಲ್ಪಸಂಖ್ಯಾತ ಮೋರ್ಚದ ಅಧ್ಯಕ್ಷ ಅಲಿ ಹುಸೈನ್ ತಿಳಿಸಿದ್ದಾರೆ.