×
Ad

ಬಾಲಕಿಯ ಅತ್ಯಾಚಾರಗೈದು ಬೆಂಕಿ ಹಚ್ಚಿದ ದುಷ್ಕರ್ಮಿ

Update: 2018-05-06 21:12 IST

ರಾಂಚಿ, ಮೇ 6: ಹದಿನಾರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ಘಟನೆ ಜಾರ್ಖಂಡ್‌ನ ಪಾಕುರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಶೇ. 70ರಷ್ಟು ಸುಟ್ಟ ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿರುವ ಬಾಲಕಿ ಪಶ್ಚಿಮಬಂಗಾಳದ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಜಾರ್ಖಂಡ್‌ನಲ್ಲಿ ಈ ವಾರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಬೆಂಕಿ ಹಚ್ಚಿರುವ ಎರಡನೇ ಘಟನೆ ಇದಾಗಿದೆ. ಶುಕ್ರವಾರ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಛಾತ್ರಾ ಜಿಲ್ಲೆಯ ಗ್ರಾಮವೊಂದರಿಂದ 15 ಮಂದಿಯನ್ನು ಬಂಧಿಸಲಾಗಿದೆ. ಪಾಕುರ್‌ನಲ್ಲಿ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆಯ ಯತ್ನದ ಘಟನೆ ಶುಕ್ರವಾರ ನಡೆದಿದೆ. ಆದರೆ, ಶನಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬಚ್ಚನ್ ಮಂಡಲ್‌ನನ್ನು ಪಾಕುರ್ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ ಹಾಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಾಲಕಿ ಏಕಾಂಗಿಯಾಗಿರುವಾಗ ಬಚ್ಚನ್ ಮಂಡಲ್ ಮನೆ ಒಳಗೆ ಪ್ರವೇಶಿಸಿ ಅತ್ಯಾಚಾರ ಎಸಗಿದ್ದಾನೆ. ಅನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂದು ಬಾಲಕಿಯ ಕುಟುಂಬ ದಾಖಲಿಸಿದ ದೂರಿನಲ್ಲಿ ಹೇಳಲಾಗಿದೆ.

ಪ್ರಕರಣದ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳ ತಂಡವೊಂದನ್ನು ರೂಪಿಸಲಾಗಿದೆ ಹಾಗೂ ಅವರನ್ನು ಹೇಳಿಕೆ ಪಡೆಯಲು ಬಾಲಕಿ ದಾಖಲಾಗಿರುವ ಪಶ್ಚಿಮಬಂಗಾಳದ ಬೆಹ್ರಾಮ್‌ಪುರದ ಖಾಸಗಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ ಎಂದು ಪಾಕುರ್ ಉಪ ವಿಭಾಗದ ಪೊಲೀಸ್ ಅಧಿಕಾರಿ ಶ್ರವಣ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News