ಏಶ್ಯಾಡ್, ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಸೂಪರ್ ಸರಣಿಯಿಂದ ಶ್ರೀಕಾಂತ್ ಹೊರಕ್ಕೆ?
ಹೊಸದಿಲ್ಲಿ, ಮೇ 6: ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ ಬಳಿಕ ಭಾರತದ ಶಟ್ಲರ್ ಕೆ.ಶ್ರೀಕಾಂತ್ ಭಾರತಕ್ಕೆ ಮುಂಬರುವ ಏಶ್ಯನ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಮತ್ತಷ್ಟು ಪದಕಗಳನ್ನು ಗೆಲ್ಲುವತ್ತ ಚಿತ್ತವಿರಿಸಿದ್ದಾರೆ.
ವಿಶ್ವದ ನಂ.3ನೇ ಆಟಗಾರ ಶ್ರೀಕಾಂತ್‌ಗೆ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಗಾಯದ ಸಮಸ್ಯೆಯಿಂದ ಮುಕ್ತವಾಗಿರುವುದು ಒಂದು ಸಮಸ್ಯೆಯಾಗಿದೆ.
ಫಿಟ್‌ನೆಸ್ ಕಾಯ್ದುಕೊಳ್ಳುವ ಉದ್ದೇಶದಿಂದ ಜಕಾರ್ತದಲ್ಲಿ ನಡೆಯುವ ಏಷ್ಯಾಗೇಮ್ಸ್‌ಗೆ ತಯಾರಿಯಾಗಲು ಕೆಲವು ಸೂಪರ್ ಸರಣಿಯಿಂದ ದೂರ ಉಳಿಯುವ ಬಗ್ಗೆ ಚಿಂತಿಸುತ್ತಿದ್ದಾರೆ.
‘‘ನಾನು ಸಹಿತ ಎಲ್ಲ ಬ್ಯಾಡ್ಮಿಂಟನ್ ಆಟಗಾರರಿಗೆ ಗಾಯದ ಸಮಸ್ಯೆ ಒಂದು ಚಿಂತೆಯ ವಿಷಯ. ನಾನು ಕಳೆದ ವರ್ಷ ಹಾಗೂ ಈ ವರ್ಷದ ಆರಂಭದಲ್ಲಿ ಗಾಯಗೊಂಡಿದ್ದೆ. ಆರೋಗ್ಯ ನನ್ನ ಮೊದಲ ಆದ್ಯತೆ. ಹಾಗಾಗಿ ಕೆಲವು ಸೂಪರ್ ಸರಣಿಯಿಂದ ಹೊರಗುಳಿಯುವೆ. ಎಲ್ಲ ಸೂಪರ್ ಸರಣಿಯನ್ನು ಆಡಲಾರೆ’’ ಎಂದು ಶ್ರೀಕಾಂತ್ ಹೇಳಿದ್ದಾರೆ.