×
Ad

ಐಪಿಎಲ್‌ನಲ್ಲಿ 4,000 ರನ್ ಪೂರೈಸಿದ ಉತ್ತಪ್ಪ

Update: 2018-05-06 23:46 IST

ಮುಂಬೈ, ಮೇ 6: ಕಳೆದ ಹಲವು ವರ್ಷಗಳಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ 4,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ಉತ್ತಪ್ಪ 32 ಎಸೆತಗಳನ್ನು ಎದುರಿಸಿ ಟೂರ್ನಮೆಂಟ್ ಇತಿಹಾಸದಲ್ಲಿ 23ನೇ ಅರ್ಧಶತಕ ಸಿಡಿಸಿದರು. ನಿತೀಶ್ ರಾಣಾರೊಂದಿಗೆ 3ನೇ ವಿಕೆಟ್‌ಗೆ 84 ರನ್ ಜೊತೆಯಾಟ ನಡೆಸಿದರು.

34ರ ಹರೆಯದ ಉತ್ತಪ್ಪ 35 ಎಸೆತಗಳಲ್ಲಿ 6 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ಸಹಿತ 54 ರನ್ ಗಳಿಸಿದರು.

ಮುಂಬೈ ತಂಡದ ಲೆಗ್-ಸ್ಪಿನ್ನರ್ ಮಯಾಂಕ್ ಮರ್ಕಂಡೆ ಎಸೆದ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಸಿಡಿಸಿದ ಉತ್ತಪ್ಪ ತನ್ನದೇ ಶೈಲಿಯಲ್ಲಿ ಐಪಿಎಲ್ ಟೂರ್ನಿಯಲ್ಲಿ 4,000 ರನ್ ಪೂರೈಸಿದರು.

ಮುಂಬೈ ವೇಗದ ಬೌಲರ್ ಬೆನ್ ಕಟ್ಟಿಂಗ್ ಬೌಲಿಂಗ್‌ನಲ್ಲಿ ಸತತ ನಾಲ್ಕು ಬೌಂಡರಿಗಳನ್ನು ಬಾರಿಸಿದ ಉತ್ತಪ್ಪ ಕೆಕೆಆರ್‌ಗೆ ಮೇಲುಗೈ ಒದಗಿಸಿಕೊಟ್ಟಿದ್ದರು.

ಉತ್ತಪ್ಪ ಈ ತನಕ ಐಪಿಎಲ್‌ನಲ್ಲಿ 23 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದಾರೆ.

ಐಪಿಎಲ್‌ನಲ್ಲಿ 4,000ಕ್ಕೂ ಅಧಿಕ ರನ್ ಗಳಿಸಿದ ಇತರ ದಾಂಡಿಗರೆಂದರೆ: ಸುರೇಶ್ ರೈನಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಗೌತಮ್ ಗಂಭೀರ್ ಹಾಗೂ ಡೇವಿಡ್ ವಾರ್ನರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News