×
Ad

ವೀನಸ್, ಜೆಲೆನಾಗೆ ಆಘಾತ, ಸ್ವಿಟೋಲಿನಾಗೆ ಜಯ

Update: 2018-05-06 23:50 IST

ಮ್ಯಾಡ್ರಿಡ್, ಮೇ 6: ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ ಮ್ಯಾಡ್ರಿಡ್ ಟೆನಿಸ್ ಓಪನ್‌ನ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಲಾಟ್ವಿಯ ಆಟಗಾರ್ತಿ ಜೆಲೆನಾ ಶ್ರೇಯಾಂಕರಹಿತ ರೊಮಾನಿಯದ ಇರಿನಾ-ಕ್ಯಾಮೆಲಿಯಾ ಬೆಗು ವಿರುದ್ಧ 3-6, 3-6 ನೇರ ಸೆಟ್‌ಗಳಿಂದ ಸೋತಿದ್ದಾರೆ.

20ರ ಹರೆಯದ ಜೆಲೆನಾ ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಬೇಕಾದರೆ ಶನಿವಾರದ ಪಂದ್ಯದಲ್ಲಿ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಲೇಬೇಕಾಗುತ್ತದೆ.

ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಕೂಡ ಮೊದಲ ಸುತ್ತಿನಲ್ಲಿ ಎಡವಿದ್ದಾರೆ. 2010ರಲ್ಲಿ ಮ್ಯಾಡ್ರಿಡ್ ಓಪನ್‌ನಲ್ಲಿ ರನ್ನರ್ಸ್-ಅಪ್ ಆಗಿದ್ದ ವೀನಸ್ ಇಸ್ಟೋನಿಯದ ಅನೆಟ್ಟ್ ಕಾಂಟಾವಿಟ್ ವಿರುದ್ಧ 6-3, 3-6, 2-6 ಸೆಟ್‌ಗಳಿಂದ ಸೋತಿದ್ದಾರೆ. ವಿಶ್ವದ ನಂ.4ನೇ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಹಾಗೂ ವಿಶ್ವದ ಮಾಜಿ ನಂ.1 ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾ ಸುಲಭ ಜಯ ಸಾಧಿಸಿ ಎರಡನೇ ಸುತ್ತಿಗೇರಿದ್ದಾರೆ.

ಉಕ್ರೇನ್‌ನ ಸ್ವಿಟೋಲಿನಾ ಅವರು ಅಲಿಝ್ ಕಾರ್ನೆಟ್‌ರನ್ನು 6-2, 6-2 ನೇರ ಸೆಟ್‌ಗಳಿಂದ ಮಣಿಸಿದರು. ಸ್ವಿಟೋಲಿನಾ ಈ ವರ್ಷ ಮೂರನೇ ಪ್ರಶಸ್ತಿ ಜಯಿಸುವ ಗುರಿಹಾಕಿಕೊಂಡಿದ್ದಾರೆ. ಆದರೆ, ಅವರು ಈ ತನಕ ಮ್ಯಾಡ್ರಿಡ್ ಓಪನ್‌ನಲ್ಲಿ ಎರಡನೇ ಸುತ್ತು ದಾಟಿಲ್ಲ.

ಕಳೆದ ತಿಂಗಳು ಸ್ಟಟ್‌ಗರ್ಟ್ ಓಪನ್ ಪ್ರಶಸ್ತಿ ಜಯಿಸಿರುವ ಆರನೇ ಶ್ರೇಯಾಂಕದ ಪ್ಲಿಸ್ಕೋವಾ ಅವರು ಎಲೆನಾ ವೆಸ್ನಿನಾರನ್ನು 6-4, 6-2 ಅಂತರದಿಂದ ಸೋಲಿಸಿ ಸತತ ಆರನೇ ಪಂದ್ಯವನ್ನು ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News