ರಾಜ್ಯದ 2 ಕಡೆ ಮಾತ್ರ ಸಿಪಿಎಂಗೆ ಸಿಪಿಐ ಬೆಂಬಲ: ಸಾತಿ ಸುಂದರೇಶ್

Update: 2018-05-07 12:04 GMT

ಮಂಗಳೂರು, ಮೇ 7: ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಸಂವಿಧಾನದ ಉಳಿವಿಗಾಗಿ ಹಾಗೂ ಜಾತ್ಯತೀತ ಶಕ್ತಿಗಳನ್ನು ಬಲಪಡಿಸುವ ಸಲುವಾಗಿ ರಾಜ್ಯದ ಎರಡು ಕಡೆ ಮಾತ್ರ ಸಿಪಿಎಂ ಪಕ್ಷವನ್ನು ಸಿಪಿಐ ಬೆಂಬಲಿಸಲಿದೆ ಎಂದು ಪಕ್ಷದ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸಿಪಿಎಂ ದ.ಕ. ಜಿಲ್ಲೆಯ 4 ಸಹಿತ ರಾಜ್ಯದ 19 ಕಡೆ ಸ್ಪರ್ಧಿಸುತ್ತಿವೆ. ಆ ಪೈಕಿ ಶ್ರೀರಾಮ ರೆಡ್ಡಿ ಮತ್ತು ಮಾರುತಿ ಮಾನ್ಪಡೆ ಅವರಿಗೆ ಸಿಪಿಐ ಬೆಂಬಲ ವ್ಯಕ್ತಪಡಿಸಿದೆ. ಮೇಲುಕೋಟೆಯಲ್ಲಿ ರೈತ ಸಂಘದ ದರ್ಶನ್ ಪುಟ್ಟಣ್ಣ ಅವರಿಗೆ ಬೆಂಬಲ ವ್ಯಕ್ತಪಡಿಸಿದೆ. ಬಳ್ಳಾರಿಯ ಕೂಡ್ಲಿಗಿ ಮತ್ತು ತುಮಕೂರಿನ ಶಿರಾದಲ್ಲಿ ಮಾತ್ರ ಸಿಪಿಐ ಸ್ಪರ್ಧಿಸುತ್ತಿದೆ. ಉಳಿದಂತೆ 219 ಕ್ಷೇತ್ರಗಳಲ್ಲೂ ಸಿಪಿಐ ಕಾಂಗ್ರೆಸ್ ಪಕ್ಷಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿವೆ ಎಂದರು.

19 ಕ್ಷೇತ್ರಗಳಲ್ಲಿ ಸಿಪಿಎಂ ಸ್ಪರ್ಧಿಸುತ್ತಿದ್ದರೂ ಕೇವಲ ಎರಡು ಕಡೆ ಮಾತ್ರ ಬೆಂಬಲ ವ್ಯಕ್ತಪಡಿಸಲು ಕಾರಣ ಏನು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಇಬ್ಬರು ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ. ಹಾಗಾಗಿ ಅವರಿಗೆ ಬೆಂಬಲ ಸೂಚಿಸಿವೆ ಎಂದರು. ಒಂದು ವೇಳೆ ಸಿಪಿಎಂ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಮತ್ತಿತರ ಪಕ್ಷಗಳನ್ನು ಸೋಲಿಸುವ ಶಕ್ತಿ ಇದ್ದಿದ್ದರೆ ಬೆಂಬಲಿಸುತ್ತಿದ್ದಿರಾ? ಎಂದು ಪತ್ರಕರ್ತರು ಪ್ರಶ್ನಿಸಿದಾಗ ‘ಹೌದು’ ಎಂದು ಸಾತಿ ಸುಂದರೇಶ್ ಉತ್ತರಿಸಿದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಮತ್ತು ಜಾತ್ಯತೀತ ಮತ ವಿಭಜನೆ ಆಗಬಾರದು ಎಂಬ ನಿಟ್ಟಿನಲ್ಲಿ ಈ ನಿಲುವು ತಾಳಲಾಗಿದೆ. ಜೆಡಿಎಸ್ ಈ ಹಿಂದೆ ಬಿಜೆಪಿ ಜೊತೆ ಕೈಜೋಡಿಸಿದ ಕಾರಣ ಮತ್ತೆ ಆ ಪಕ್ಷವನ್ನು ನಂಬಲು ಸಾಧ್ಯವಿಲ್ಲ. ಹಾಗಾಗಿ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಘೋಷಿಸಿಲ್ಲ ಎಂದ ಸಾತಿ ಸುಂದರೇಶ್, ಈಗಾಗಲೆ ನಾವು ಕಾಂಗ್ರೆಸ್ ಜೊತೆ ಜಂಟಿ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದೇವೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ ಮುಖಂಡರಾದ ವಿ.ಕುಕ್ಯಾನ್, ಎಚ್.ವಿ.ರಾವ್, ಕಾಂಗ್ರೆಸ್ ಮುಖಂಡ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News