ಬಜಾಲ್‌ಗೆ ಬಾರದ ಬಸ್: ನಾಗರಿಕರಿಂದ ಚುನಾವಣಾ ಬಹಿಷ್ಕಾರ

Update: 2018-05-07 12:56 GMT

ಮಂಗಳೂರು, ಮೇ 7: ಬಿಜೈ ಕೆಎಸ್ಸಾರ್ಟಿಸಿಯಿಂದ ಪಡೀಲು-ಫೈಸಲ್ ನಗರ ಮೂಲಕ ಬಜಾಲ್ ಪಡ್ಪುಗೆ ಸರಕಾರಿ ಬಸ್ ಮಂಜೂರು ಆಗಿದ್ದರೂ ಕೂಡಾ ಬಸ್ ಸಂಚಾರ ಆರಂಭಿಸದೇ ಇದ್ದುದನ್ನು ಖಂಡಿಸಿ ಬಜಾಲ್ ಕಲ್ಲಕಟ್ಟ ಪಡ್ಪು ನಿವಾಸಿಗಳು ಚುನಾವಣಾ ಬಹಿಷ್ಕಾರ ಹಾಕಿದ್ದಾರೆ.

ಈ ಭಾಗದ ಸಾರ್ವಜನಿಕರು ಸರಕಾರಿ ಬಸ್ಸಿಗಾಗಿ ಕಳೆದ ಹಲವು ವರ್ಷದಿಂದ ಆಗ್ರಹಿಸುತ್ತಾ ಬಂದಿದ್ದರು. ಅದರಂತೆ ನಿಕಟಪೂರ್ವ ಜಿಲ್ಲಾಧಿಕಾರಿ ಜಗದೀಶ್ ಅವರು ಬಸ್ ಸಂಚಾರಕ್ಕೆ ಆದೇಶಿಸಿದ್ದರು. ಆ ಹಿನ್ನೆಲೆಯಲ್ಲಿ ಈ ವರ್ಷದ ಮಾರ್ಚ್ 24ರಂದು ಒಂದು ಸರಕಾರಿ ಬಸ್ ಪೂರ್ವಭಾವಿಯಾಗಿ ಸಂಚರಿಸಿತ್ತು. ಈ ಸಂದರ್ಭ ಬಜಾಲ್ ನಂತೂರು ಕ್ರಾಸ್ ಬಳಿ ವ್ಯಕ್ತಿಯೊಬ್ಬರ ಕಟ್ಟಡದ ಮೆಟ್ಟಿಲು ರಸ್ತೆಗೆ ತಾಗಿದ್ದು, ಇದು ಬಸ್ ಸಂಚಾರಕ್ಕೆ ತೊಡಕಾಗಿತ್ತು. ಹಾಗಾಗಿ ಸ್ಥಳೀಯರು ಮತ್ತು ಜನಪ್ರತಿನಿಧಿಗಳು ಈ ಕಟ್ಟಡದ ಮಾಲಕರ ಬಳಿ ಮೆಟ್ಟಿಲು ತೆಗೆಸಲು ಮನವಿ ಮಾಡಿದರೂ ಸ್ಪಂದನೆ ಸಿಕ್ಕಿರಲಿಲ್ಲ. ಆ ಹಿನ್ನೆಲೆಯಲ್ಲಿ ರಸ್ತೆಗೆ ತಾಗಿರುವ ಈ ಕಟ್ಟಡದ ಮೆಟ್ಟಿಲು ಅನ್ನು ಭೂಸ್ವಾಧೀನದ ಮೂಲಕ ತೆರವುಗೊಳಿಸಬೇಕು ಮತ್ತು ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಈ ಭಾಗದ ಸುಮಾರು 300 ಮನೆಗಳ ನಿವಾಸಿಗಳು ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

ಚುನಾವಣಾ ಬಹಿಷ್ಕಾರದ ಮುಂದಾಳತ್ವವನ್ನು ಸ್ಥಳೀಯ ಪ್ರಮುಖರಾದ ಮುಸ್ತಫಾ, ಸೀತಾರಾಮ ನಾಯ್ಕ, ಸಿರಾಜುದ್ದೀನ್ ಮತ್ತಿತರರು ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News