52,686 ಹೊಸ ಮಾರುತಿ ಸುಝುಕಿ ಸ್ವಿಫ್ಟ್ ಮತ್ತು ಬಲೆನೊ ಕಾರುಗಳನ್ನು ಮಾರುತಿ ಹಿಂಪಡೆದುಕೊಳ್ಳುತ್ತಿರುವುದು ಏಕೆ ?
ಹೊಸದಿಲ್ಲಿ,ಮೇ.8 : ಡಿಸೆಂಬರ್ 1, 2017 ಹಾಗೂ ಮಾರ್ಚ್ 16, 2018 ನಡುವೆ ಫ್ಯಾಕ್ಟರಿಯಿಂದ ಹೊರ ಬಂದ 52,686 ಹೊಸ ಮಾರುತಿ ಸುಝುಕಿ ಸ್ವಿಫ್ಟ್ ಮತ್ತು ಬಲೆನೊ ಕಾರುಗಳ ಬ್ರೇಕ್ ವಾಕ್ಯೂಮ್ ಹೋಸ್ ನಲ್ಲಿ ದೋಷ ಕಂಡು ಬಂದಿದೆಯೆನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಈ ತಾಂತ್ರಿಕ ದೋಷ ಕಂಡು ಬಂದ ಕಾರುಗಳನ್ನು ಬದಲಾಯಿಸಿ ಕೊಡಲಾಗುವುದು ಎಂದು ತಿಳಿದು ಬಂದಿದೆ.
ಮೇ 14ರ ನಂತರ ಡೀಲರುಗಳು ಕಾರು ಮಾಲಕರಿಗೆ ಕರೆ ಕಳುಹಿಸಿ ವಾಹನದಲ್ಲಿರುವ ದೋಷವನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಿದ್ದಾರೆ. ಈ ಸರ್ವಿಸ್ ಅಭಿಯಾನ ಹಲವೆಡೆ ನಡೆಯಲಿದ್ದು ಸಂಪೂರ್ಣವಾಗಿ ಉಚಿತವಾಗಿದೆ. ಕಾರುಗಳ ತಪಾಸಣೆ ನಡೆಸಿ ದೋಷ ಕಂಡು ಬಂದಲ್ಲಿ ವಾಹನವನ್ನು ಬದಲಾಯಿಸಿ ಕೊಡಲಾಗುವುದು.
ಎಪ್ರಿಲ್ 2018ರಲ್ಲಿ ಮಾರುತಿ ಸುಝುಕಿ ತನ್ನ ಗರಿಷ್ಠ ಮಾರಾಟ ದಾಖಲಿಸಿದ್ದು ಪ್ರತಿ ದಿನ ಸರಾಸರಿ 5,499 ಕಾರುಗಳನ್ನು ಮಾರಾಟ ಮಾಡಿದೆ. ಕಂಪೆನಿಯ ಕಾರುಗಳ ಮಾರಾಟ ವರ್ಷ ಕಳೆದಂತೆ ಶೇ 14.2ರಷ್ಟು ಹೆಚ್ಚಾಗುತ್ತಿದೆ. ಈ ವರ್ಷದ ಎಪ್ರಿಲ್ ತಿಂಗಳಲ್ಲಿ ಕಂಪೆನಿ ಗರಿಷ್ಠ 1,65,000 ಕಾರುಗಳನ್ನು ಮಾರಾಟ ಮಾಡಿದ್ದರೆ ಈ ಹಿಂದಿನ ಗರಿಷ್ಠ ಮಾರಾಟ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದಾಖಲಾಗಿತ್ತು (1,50,521).