ಮೃತ ನವಿಲಿಗೆ ರಾಷ್ಟ್ರಧ್ವಜ ಹೊದಿಸಿ ಅಂತ್ಯಸಂಸ್ಕಾರ ನಡೆಸಿದ ದಿಲ್ಲಿ ಪೊಲೀಸರು
ಹೊಸದಿಲ್ಲಿ,ಮೇ.8: ಹುತಾತ್ಮ ಸೇನಾ ಸಿಬ್ಬಂದಿಗಳಿಗೆ ಹಾಗೂ ಅಗಲಿದ ರಾಷ್ಟ್ರ ನಾಯಕರ ಪಾರ್ಥಿವ ಶರೀರಕ್ಕೆ ಶಿಷ್ಟಾಚಾರದಂತೆ ರಾಷ್ಟ್ರಧ್ವಜ ಹೊದಿಸಲಾಗುತ್ತಿದ್ದರೆ ದಿಲ್ಲಿ ಪೊಲೀಸರು ಇತ್ತೀಚೆಗೆ ಈ ಶಿಷ್ಟಾಚಾರವನ್ನು ನವಿಲೊಂದಕ್ಕೂ ವಿಸ್ತರಿಸಿದ್ದಾರೆ. ರಾಷ್ಟ್ರೀಯ ಹಕ್ಕಿಯಾಗಿರುವ ನವಿಲೊಂದು ಇತ್ತೀಚೆಗೆ ಗಾಯಗೊಂಡ ಸ್ಥಿತಿಯಲ್ಲಿ ಹೈಕೋರ್ಟ್ ಮುಂಭಾಗದ ರಸ್ತೆಯಲ್ಲಿ ಕಂಡು ಬಂದ ನಂತರ ಅದನ್ನು ರಕ್ಷಿಸಿ ಚಾಂದನಿ ಚೌಕ್ ಪ್ರದೇಶದಲ್ಲಿರುವ ಜೈನ್ ಹಕ್ಕಿಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅದು ಅದಾಗಲೇ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದರು.
ನಂತರ ನವಿಲನ್ನು ಜೌನಪುರದಲ್ಲಿನ ಆಸ್ಪತ್ರೆಯೊಂದಕ್ಕೆ ಪೋಸ್ಟ್ ಮಾರ್ಟಂಗಾಗಿ ತೆಗೆದುಕೊಂಡು ಹೋಗಿ ಅಲ್ಲಿಯೇ ಸಮೀಪದಲ್ಲಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆಗೆ ಏರ್ಪಾಟು ಮಾಡಲಾಗಿತ್ತು.
ಅದು ರಾಷ್ಟ್ರೀಯ ಪಕ್ಷಿಯಾಗಿರುವುದರಿಂದ ಶಿಷ್ಟಾಚಾರದಂತೆ ಅದಕ್ಕೆ ಸಂಪೂರ್ಣ ರಾಷ್ಟ್ರೀಯ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು, ಮುಂದೆ ಕೂಡ ನವಿಲು ಈ ರೀತಿ ಸಾವಿಗೀಡಾದರೆ ಇದೇ ನಿಯಮವನ್ನು ಅನುಸರಿಸಲಾಗುವುದು ಎಂದು ತಿಲಕ್ ಮಾರ್ಗ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ ನವಿಲು ಶೆಡ್ಯೂಲ್-1 ಹಕ್ಕಿಯಾಗಿರುವುದರಿಂದ ಪೊಲೀಸರು ಅದಕ್ಕೆ ನಡೆಸಿದ ಅಂತ್ಯಸಂಸ್ಕಾರ ವನ್ಯಜೀವಿ ರಕ್ಷಣಾ ಕಾಯಿದೆಯನ್ನು ಉಲ್ಲಂಘಿಸಿರಬಹುದು ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ನವಿಲೊಂದು ಸತ್ತಿದ್ದರೆ ಅದರ ಪೋಸ್ಟ್ ಮಾರ್ಟಂ ನಡೆಸಿದ ನಂತರ ಅರಣ್ಯ ಇಲಾಖೆ ಅಂತ್ಯಕ್ರಿಯೆ ನಡೆಸಬೇಕೆಂದು ಅವರು ಹೇಳುತ್ತಾರೆ. ಆದರೆ ರಾಷ್ಟ್ರಧ್ವಜವನ್ನು ಸತ್ತ ನವಿಲಿನ ದೇಹಕ್ಕೆ ಹೊದಿಸಬೇಕೆಂಬ ನಿಯಮವೇನೂ ಇಲ್ಲ ಎಂದೂ ಅವರು ವಿವರಿಸುತ್ತಾರೆ.