×
Ad

ಮರಳು ಮಾಫಿಯಾದಿಂದ ಪೊಲೀಸ್ ಕಾನ್‌ಸ್ಟೇಬಲ್ ಹತ್ಯೆ

Update: 2018-05-08 18:52 IST

ಚೆನ್ನೈ,ಮೇ 8: ನಂಬಿಯಾರ್ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಯತ್ನಿಸಿದ್ದ ಪೊಲೀಸ್ ಕಾನ್‌ಸ್ಟೇಬಲ್ ಓರ್ವರನ್ನು ತಿರುನೆಲ್ವೆಲಿಯ ಮರಳು ಮಾಫಿಯಾ ಹತ್ಯೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಟೆಕ್ನಿಕ್ ವಿದ್ಯಾರ್ಥಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ವಡಕ್ಕು ವಿಜಯನಾರಾಯಣಂ ಪೊಲೀಸ್ ಠಾಣೆಯಲ್ಲಿ ಸ್ಪೆಷಲ್ ಬ್ರಾಂಚ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಗದೀಶ ದುರೈ(37) ಅವರಿಗೆ ರವಿವಾರ ರಾತ್ರಿ ಪಿಎಸ್‌ಐ ಎಂದು ಹೇಳಿಕೊಂಡಿದ್ದ ವ್ಯಕ್ತಿಯೋರ್ವ ದೂರವಾಣಿ ಕರೆ ಮಾಡಿ ಪಾಂಡಿಚೇರಿ ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು,ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದರು. ಅವರನ್ನು ಕಂಡು ಮರಳು ಮಾಫಿಯಾದ ಸದಸ್ಯರು ಟ್ರಾಕ್ಟರ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಆದರೆ ದುರೈ ಅವರನ್ನು ಬೆನ್ನಟ್ಟಿ ಹಿಡಿದಿದ್ದು,ದುಷ್ಕರ್ಮಿಗಳು ಕಬ್ಬಿಣದ ರಾಡ್‌ಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದರು. ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದುರೈಯವರ ರಕ್ತಸಿಕ್ತ ದೇಹ ಪತ್ತೆಯಾಗಿತ್ತು.

ಅಕ್ರಮ ಮರಳುಗಾರಿಕೆಯ ಬೆನ್ನು ಬಿದ್ದಿದ್ದ ದುರೈಯವರ ಹತ್ಯೆಯಲ್ಲಿ ಪೊಲೀಸ್ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಮೃತರ ಪತ್ನಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News