×
Ad

ಉತ್ತರ ಪ್ರದೇಶದಲ್ಲಿ ನಾಯಿಗಳ ದಾಳಿಗೆ 12 ಮಕ್ಕಳು ಬಲಿ

Update: 2018-05-08 19:00 IST

ಸೀತಾಪುರ (ಉ.ಪ್ರ), ಮೇ 8: ಉತ್ತರ ಪ್ರದೇಶದ ಸೀತಾಪುರ ಎಂಬಲ್ಲಿ ನಾಯಿಗಳ ದಾಳಿಗೆ ತುತ್ತಾಗಿ ಕಳೆದ ಆರು ತಿಂಗಳಲ್ಲಿ ಹನ್ನೆರಡು ಮಕ್ಕಳು ಸಾವನ್ನಪ್ಪಿದ್ದು ಆರು ಮಂದಿ ಗಾಯಗೊಂಡಿದ್ದಾರೆ. ಸದ್ಯ ಈ ನಾಯಿಗಳನ್ನು ಪತ್ತೆ ಮಾಡಿ ನಿಯಂತ್ರಿಸಲು ಸರಕಾರ ಡ್ರೋನ್‌ಗಳ ಮೊರೆ ಹೋಗಿದೆ. ಕಳೆದ ಒಂದು ವಾರದಲ್ಲಿ ಆರು ಮಕ್ಕಳು ನಾಯಿ ದಾಳಿಗೆ ಬಲಿಯಾಗಿದ್ದಾರೆ. ನಾಯಿ ದಾಳಿಗೆ ಹೆದರಿ ಹೆತ್ತವರು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನೇ ನಿಲ್ಲಿಸಿದ್ದರೆ, ಜನರು ಗುಂಪಲ್ಲೇ ನಡೆದಾಡುವಂಥ ಪರಿಸ್ಥಿತಿ ಉದ್ಭವವಾಗಿದೆ. ನಾಯಿಗಳನ್ನು ಓಡಿಸಲು ಜನರು ಕೈಯಲ್ಲಿ ಕತ್ತಿ, ದೊಣ್ಣೆ ಮುಂತಾದ ವಸ್ತುಗಳನ್ನು ಹಿಡಿದುಕೊಂಡೇ ಮನೆಯಿಂದ ಹೊರಬರುತ್ತಿರುವ ದೃಶ್ಯಗಳು ಸೀತಾಪುರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿದೆ. ಶನಿವಾರ ನಡೆದ ಎರಡು ಪ್ರತ್ಯೇಕ ಘಟನೆಗಳನ್ನು ಹತ್ತು ವರ್ಷದ ಬಾಲಕನೊಬ್ಬ ನಾಯಿ ದಾಳಿಗೆ ಬಲಿಯಾದರೆ ಇನ್ನೊರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಈ ಕುರಿತು ಮಾಹಿತಿ ನೀಡಿದ ಲಕ್ನೊ ವಲಯ ಐಜಿ, ಸುಜಿತ್ ಕುಮಾರ್ ಪಾಂಡೆ, ಪರಿಸ್ಥಿತಿಯು ನಿಯಂತ್ರಣಕ್ಕೆ ಬರುವವರೆಗೆ ಮಕ್ಕಳು ಒಬ್ಬಂಟಿಯಾಗಿ ಮನೆಯಿಂದ ಹೊರಬರದಂತೆ ಜನರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ನಾಯಿಗಳನ್ನು ಪತ್ತೆ ಹಚ್ಚಲು ಮತ್ತು ದಾಳಿಗಳ ಬಗ್ಗೆ ವರದಿ ಮಾಡಲು 8-10 ಜನರ ತಂಡವನ್ನು ರಚಿಸಲಾಗುವುದು. ಲಕ್ನೊ ಮತ್ತು ಮಥುರಾದಿಂದ ವಿಶೇಷ ತಂಡವನ್ನು ಕರೆಸಲಾಗಿದೆ. ಈ ನಾಯಿಗಳಿಗೆ ಚುಚ್ಚುಮದ್ದುಗಳನ್ನು ನೀಡುವ ಸಲುವಾಗಿ ಎಬಿಸಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದವರು ತಿಳಿಸಿದ್ದಾರೆ. ಮೊದಲೆಲ್ಲ ಕಸಾಯಖಾನೆಗಳಿದ್ದ ಕಾರಣ ಈ ನಾಯಿಗಳಿಗೆ ಸಾಕಷ್ಟು ಆಹಾರ ಸಿಗುತ್ತಿತ್ತು. ಆದರೆ ಈಗ ಕಸಾಯಿಖಾನೆಗಳು ಮುಚ್ಚಿರುವುದರಿಂದ ಈ ನಾಯಿಗಳಿಗೆ ಸರಿಯಾಗಿ ಆಹಾರ ಸಿಗುತ್ತಿಲ್ಲ ಎಂದು ಬರೇಲಿ ಮೂಲದ ಪಶು ಸಂಶೋಧನಾ ಸಂಸ್ಥೆಯ ನಿರ್ದೇಶಕ ಆರ್.ಕೆ ಸಿಂಗ್ ತಿಳಿಸಿದ್ದಾರೆ.

ಇದಕ್ಕೂ ಮೊದಲು ನಾಯಿಗಳ ಇಂಥ ಆಕ್ರಮಣಕಾರಿ ಸ್ವಭಾವದ ಬಗ್ಗೆ ಎಂದೂ ವರದಿಯಾಗಿರಲಿಲ್ಲ. ಸೀತಾಪುರದ ನಾಯಿಗಳನ್ನು ಮಾನವ ಭಕ್ಷಕ ಎಂದು ಕರೆಯುವುದು ಸರಿಯಲ್ಲ. ಇದು ಮೂಲತಃ ಮನುಷ್ಯ ಮತ್ತು ಪ್ರಾಣಿಯ ನಡುವಿನ ಸಂಘರ್ಷ ಎಂದವರು ವಿವರಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಆದಿತ್ಯನಾಥ್ ಭವಿಷ್ಯದಲ್ಲಿ ಇಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಅದಕ್ಕಾಗಿ ಪೊಲೀಸ್ ಇಲಾಕೆ, ಪಶು ಆರೋಗ್ಯ ಇಲಾಕೆ, ನಗರ ಪಾಲಿಕೆ ಮತ್ತು ನಗರ ಪಂಚಾಯತ್‌ನ ಅಧಿಕಾರಿಗಳ ತಂಡವೊಂದನ್ನು ರಚಿಸಬೇಕು ಎಂದವರು ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News