×
Ad

ಉ.ಪ್ರದೇಶ: ಮೊಬೈಲ್ ನಂಬರ್ ಕೊಡಲು ನಿರಾಕರಿಸಿದ ದಲಿತ ಬಾಲಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿ

Update: 2018-05-08 23:20 IST

ಲಕ್ನೊ, ಮೇ 8: ಮೊಬೈಲ್ ನಂಬರ್ ಕೊಡಲು ನಿರಾಕರಿಸಿದ 16ರ ಹರೆಯದ ದಲಿತ ಬಾಲಕಿಯ ಮೇಲೆ ನೆರೆಮನೆಯ ವ್ಯಕ್ತಿ ಬೆಂಕಿಹಚ್ಚಿದ ಘಟನೆ ಉತ್ತರಪ್ರದೇಶದ ಅಝಮ್‌ಗಢ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಶೇ.80ರಷ್ಟು ಸುಟ್ಟ ಗಾಯಗಳಾಗಿರುವ ಬಾಲಕಿಯನ್ನು ವಾರಣಾಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫರೀಹಾ ಗ್ರಾಮದ ನಿವಾಸಿಯಾಗಿರುವ ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಮನೆಗೆ ಪ್ರವೇಶಿಸಿದ ನೆರೆಮನೆಯ ಮುಹಮ್ಮದ್ ಶಾಫಿ ಎಂಬಾತ ಆಕೆಯ ಮೊಬೈಲ್ ನಂಬರ್ ಕೊಡುವಂತೆ ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದಾಗ ಆಕೆಯನ್ನು ಪೀಡಿಸಿ ಬಳಿಕ ಬೆಂಕಿಹಚ್ಚಿದ್ದಾನೆ ಎಂದು ಬಾಲಕಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಬಾಲಕಿಯ ಚೀರಾಟ ಕೇಳಿದ ನೆರೆಮನೆಯವರು ಧಾವಿಸಿ ಬಂದು ಶಾಫಿಯನ್ನು ಹಿಡಿದು ಥಳಿಸಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈತನ ವಿರುದ್ಧ ಪೋಸ್ಕೊ ಕಾಯ್ದೆ, ದಲಿತ ದೌರ್ಜನ್ಯ ಕಾಯ್ದೆ ಸಹಿತ ಹಲವು ಪ್ರಕರಣಗಳಡಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಥಳಿತದಿಂದ ಗಾಯಗೊಂಡಿರುವ ಶಾಫಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ . ಘಟನೆಯ ಬಳಿಕ ಗ್ರಾಮದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News