×
Ad

ತಾಜ್‌ಮಹಲ್ ರಕ್ಷಣೆಗೆ ಕ್ರಮಕೈಗೊಳ್ಳದ ಪುರಾತತ್ವ ಇಲಾಖೆಗೆ ಸುಪ್ರೀಂಕೋರ್ಟ್ ತರಾಟೆ

Update: 2018-05-09 15:01 IST

ಹೊಸದಿಲ್ಲಿ, ಮೇ 9: ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ತಾಜ್‌ಮಹಲ್ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಲು ವಿಫಲವಾಗಿರುವ ಭಾರತೀಯ ಪುರಾತತ್ವ ಇಲಾಖೆಯನ್ನು ಸುಪ್ರೀಂಕೋರ್ಟ್ ಬುಧವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ತಾಜ್‌ಮಹಲ್ ಕೀಟಗಳ ಬಾಧೆಗೆ ಒಳಗಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಕೀಟಗಳ ಬಾಧೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪುರಾತತ್ವ ಇಲಾಖೆ ಸಹಿತ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದೆ.

‘‘ಪುರಾತತ್ವ ಇಲಾಖೆ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಪುರಾತತ್ವ ಇಲಾಖೆಯು ತನ್ನನ್ನು ಸಮರ್ಥಿಕೊಳ್ಳುತ್ತಿರುವ ರೀತಿಯು ನಮಗೆ ಅಚ್ಚರಿ ಉಂಟು ಮಾಡಿದೆ. ನೀವು(ಕೇಂದ್ರ ಸರಕಾರ)ಪುರಾತತ್ವ ಇಲಾಖೆಯ ಅಗತ್ಯವಿದೆಯೇ, ಇಲ್ಲವೇ ಎನ್ನುವುದು ದಯವಿಟ್ಟು ನಿರ್ಧರಿಸಿ’’ ಎಂದು ಜಸ್ಟಿಸ್‌ಗಳಾದ ಎಂ.ಬಿ. ಲೋಕುರ್ ಹಾಗೂ ದೀಪಕ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಎನ್‌ಎಸ್ ನಾಡಕರ್ಣಿಗೆ ತಿಳಿಸಿದೆ. ನಾಡಕರ್ಣಿ ಕೇಂದ್ರದ ಪರ ನ್ಯಾಯಾಲಯದಲ್ಲಿ ಹಾಜರಾಗಿದ್ದರು.

ತಾಜ್‌ಮಹಲ್ ರಕ್ಷಣೆಗೆ ಅಂತಾರಾಷ್ಟ್ರೀಯ ತಜ್ಞರುಗಳನ್ನು ಆಯ್ಕೆ ಮಾಡಬೇಕೆಂಬ ಉಚ್ಚ ನ್ಯಾಯಾಲಯದ ಸಲಹೆಯನ್ನು ಪರಿಸರ ಹಾಗೂ ಅರಣ್ಯ ಸಚಿವಾಲಯ ಪರಿಗಣಿಸಿದೆ ಎಂದು ನ್ಯಾಯಪೀಠಕ್ಕೆ ನಾಡಕರ್ಣಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News