ಬಿಜೆಪಿ ಶಾಸಕ, ಪುತ್ರನಿಂದ ಲೈಂಗಿಕ ದೌರ್ಜನ್ಯ: ಆರೋಪ

Update: 2018-05-09 11:58 GMT

ಲಕ್ನೋ, ಮೇ 9: ಬಿಜೆಪಿ ಶಾಸಕ ಮತ್ತಾತನ ಪುತ್ರ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ಶಹಜಹಾನ್ ಪುರದ ಕಲೆಕ್ಟರ್ ಕಚೇರಿಯೆದುರು ಧರಣಿ ಕುಳಿತಿದ್ದಾರೆ. ತಿಲ್ಹರ್ ಕ್ಷೇತ್ರದ ಬಿಜೆಪಿ ಶಾಸಕ ರೋಶನ್ ಲಾಲ್ ವರ್ಮ ಮತ್ತಾತನ ಪುತ್ರ ಮನೋಜ್ ವರ್ಮ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು `ಬಾಹ್ಯ ಒತ್ತಡ'ದಿಂದಾಗಿ ಪ್ರಕರಣ ದಾಖಲಿಸಿಲ್ಲ ಎಂದು ಸಂತ್ರಸ್ತೆ ದೂರಿದ್ದಾಳೆ.

ಘಟನೆ 2011ರಲ್ಲಿ ನಡೆದಿದೆಯೆನ್ನಲಾಗಿದ್ದು, ಆಗ ಆರೋಪಿ ಶಾಸಕ ಬಹುಜನ್ ಸಮಾಜ ಪಕ್ಷದಲ್ಲಿದ್ದರು. ಪೊಲೀಸರು ಈ ನಿಟ್ಟಿನಲ್ಲಿ ಪ್ರಕರಣ ಕೂಡ ದಾಖಲಿಸಿದ್ದರು ಎಂದು ಶಾಸಕ ಹೇಳಿಕೊಂಡಿದ್ದಾರೆ. ಈಗ ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ  ಈ ಪ್ರಕರಣವನ್ನು ಮತ್ತೆ ಕೆದಕಿವೆ. ನಾನು ಯಾವುದೇ ತನಿಖೆಯನ್ನು ಬದಿಗೆ ಸರಿಸಲು ಯತ್ನಿಸುತ್ತಿಲ್ಲ, ಯುವತಿಯ ಮೂಲಕ ವಿಪಕ್ಷಗಳು ರಾಜಕೀಯ ಪ್ರಯೋಜನ ಪಡೆಯಲೆತ್ನಿಸುತ್ತಿವೆ ಎಂದು ಶಾಸಕ ಆರೋಪಿಸಿದ್ದಾರೆ.

ಸಂತ್ರಸ್ತೆ ಕಲೆಕ್ಟರ್ ಕಚೇರಿ ಹೊರಗೆ ಧರಣಿ ಕುಳಿತ ನಂತರ ಆಕೆಗೆ ಅನಾಮಿಕರಿಂದ ಬೆದರಿಕೆ ಕರೆಗಳು ಬರುತ್ತಿವೆ. ದೂರನ್ನು ವಾಪಸ್ ಪಡೆಯದೇ ಇದ್ದರೆ  ಆಕೆಯನ್ನು ಕೊಲ್ಲುವುದಾಗಿ ಆಕೆಯ ಮನೆಗೆ ನುಗ್ಗಿದ ರೌಡಿಗಳು ಬೆದರಿಕೆ ಹಾಕಿದ್ದಾರೆಂದು ಆಕೆಯ ವಕೀಲ ಅವಧೇಶ್ ಸಿಂಗ್ ದೂರಿದ್ದಾರೆ.

ರಾಜ್ಯ ಸರಕಾರದ ಸೂಚನೆಯಂತೆ ಪ್ರಕರಣವನ್ನು ಕ್ರೈಂ ಬ್ರ್ಯಾಂಚ್-ಸಿಐಡಿಗೆ ವಹಿಸಲಾಗುವುದು ಎಂಬ ಆಶ್ವಾಸನೆ ದೊರೆತ ನಂತರ ಯುವತಿ ತನ್ನ ಪ್ರತಿಭಟನೆ ವಾಪಸ್ ಪಡೆದಿದ್ದಾಳೆಂದು ಎಸ್ಪಿ ಕೆ ಬಿ ಸಿಂಗ್ ಹೇಳಿದ್ದಾರೆ.

ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇಂಗರ್ ಆರೋಪಿಯಾಗಿರುವ ಉನ್ನಾವೋ ಪ್ರಕರಣ ದೇಶಾದ್ಯಂತ ಆಕ್ರೋಶ ಹುಟ್ಟಿಸಿದ ಬೆನ್ನಿಗೇ ಬೆಳಕಿಗೆ ಬಂದ ಈ ಪ್ರಕರಣ ಕೂಡ ಸಾಕಷ್ಟು ಚರ್ಚೆಗೊಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News