ಸುಪ್ರೀಂ ಕೋರ್ಟ್ ವಕೀಲರ ಸಂಘದಿಂದ ಬೀಳ್ಕೊಡುಗೆ: ಆಹ್ವಾನ ನಿರಾಕರಿಸಿದ ನ್ಯಾ.ಚೆಲಮೇಶ್ವರ್
ಹೊಸದಿಲ್ಲಿ,ಮೇ 9: ಸರ್ವೋಚ್ಚ ನ್ಯಾಯಾಲಯದ ವಕೀಲರ ಸಂಘ(ಎಸ್‌ಸಿಬಿಎ) ದಿಂದ ತನ್ನ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಹ್ವಾನವನ್ನು ನ್ಯಾ.ಚೆಲಮೇಶ್ವರ್ ಅವರು ನಿರಾಕರಿಸಿದ್ದಾರೆ.
ವಕೀಲರ ಸಂಘವು ಜೂ.22ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾಗಲಿರುವ ನ್ಯಾ.ಚೆಲಮೇಶ್ವರ ಅವರಿಗಾಗಿ ಬೀಳ್ಕೊಡುಗೆ ಸಮಾರಂಭವನ್ನು ಮೇ 18ರಂದು ಹಮ್ಮಿಕೊಂಡಿತ್ತು. ಮೇ 19ರಿಂದ ನ್ಯಾಯಾಲಯದ ಬೇಸಿಗೆ ರಜೆ ಆರಂಭಗೊಳ್ಳಲಿದೆ. ನ್ಯಾ.ಚೆಲಮೇಶ್ವರ್ ಅವರು ತನ್ನ ಇತರ ಮೂವರು ಸಹೋದ್ಯೋಗಿಗಳೊಂದಿಗೆ ಸುದ್ದಿಗೋಷ್ಠಿಯನ್ನು ಕರೆದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿ ಟೀಕಿಸಿದ್ದರು.
ಬೀಳ್ಕೊಡುಗೆ ಸಮಾರಂಭಕ್ಕೆ ಆಹ್ವಾನಿಸಲು ಸಂಘವು ಕಳೆದ ವಾರ ನ್ಯಾ.ಚೆಲಮೇಶ್ವರ ಅವರನ್ನು ಭೇಟಿಯಾಗಿತ್ತು. ಆದರೆ ಅವರು ಆಹ್ವಾನವನ್ನು ನಿರಾಕರಿಸಿದ್ದಾರೆ ಎಂದು ಎಸ್‌ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್ ಅವರು ಬುಧವಾರ ಸುದ್ದಿಸಂಸ್ಥೆಗೆ ತಿಳಿಸಿದರು.
ಈ ಹಿಂದೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದಿಂದ ಇನ್ನೊಂದು ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದಾಗಲೂ ತಾನು ಬೀಳ್ಕೊಡುಗೆ ಕಾರ್ಯಕ್ರಮವನ್ನು ಒಪ್ಪಿಕೊಂಡಿರಲಿಲ್ಲ ಎಂದೂ ನ್ಯಾ.ಚೆಲಮೇಶ್ವರ್ ಅವರು ಸಂಘದ ಸದಸ್ಯರಿಗೆ ತಿಳಿಸಿದ್ದಾಗಿ ಸುದ್ದಿಸಂಸ್ಥೆಯು ಹೇಳಿದೆ.