ಪಂಜಾಬ್‌ನಲ್ಲಿ ಆರು ವರ್ಷಗಳಲ್ಲಿ ದಾಖಲೆಯ ಗೋಧಿ ಉತ್ಪಾದನೆ
Update: 2018-05-09 22:40 IST
ಜಲಂಧರ,ಮೇ 9: ಪಂಜಾಬ್‌ನಲ್ಲಿ ಈ ವರ್ಷ ಕಳೆದ ಆರು ವರ್ಷಗಳಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಗೋಧಿ ಉತ್ಪಾದನೆಯಾಗಿದೆ. ಕೇಂದ್ರವು ತನಗೆ ನಿಗದಿಗೊಳಿಸಿದ್ದ ಖರೀದಿ ಗುರಿಯನ್ನೂ ದಾಟಿರುವ ರಾಜ್ಯವು 2017-18ನೇ ಸಾಲಿಗೆ ದೇಶಾದ್ಯಂತ ಒಟ್ಟು ಗೋದಿ ಖರೀದಿ ಗುರಿಯಲ್ಲಿ ಶೇ.38ಕ್ಕೂ ಹೆಚ್ಚಿನ ಪಾಲನ್ನು ಕೊಡುಗೆಯಾಗಿ ನೀಡಿದೆ. ರಾಜ್ಯ ಸರಕಾರವು ಗೋಧಿಯ ಖರೀದಿಯನ್ನು ಇನ್ನೂ ಮುಂದುವರಿಸಿದೆ.
ರಾಜ್ಯ ಮತ್ತು ಸರಕಾರಿ ಏಜೆನ್ಸಿಗಳು ಮೇ 7ರವರೆಗೆ ಪಂಜಾಬಿನ ಮಂಡಿಗಳಿಂದ 122.13 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಿವೆ. ಕೇಂದ್ರವು ಇಡೀ ದೇಶಕ್ಕೆ 320 ಲ.ಮೆ.ಟ. ಮತ್ತು ಪಂಜಾಬಿಗೆ 119 ಲ.ಮೆ.ಟ.ಗೋಧಿ ಖರೀದಿಯ ಗುರಿಗಳನ್ನು ನಿಗದಿಗೊಳಿಸಿತ್ತು.
ರಾಜ್ಯದಲ್ಲಿ ಕಳೆದ ವರ್ಷ 176 ಲ.ಮೆ.ಟ.ಗೋಧಿ ಉತ್ಪಾದನೆಯಾಗಿದ್ದರೆ ಈ ವರ್ಷ ಅದು 186 ಲ.ಮೆ.ಟ.ಗೇರಲಿದೆ.
ಪಂಜಾಬಿನಲ್ಲಿ 35 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಗೋದಿಯನ್ನು ಬೆಳೆಯಲಾಗುತ್ತಿದೆ.