ಉ.ಪ್ರ: ಗುಡುಗು-ಮಿಂಚಿನ ಮಳೆಯ ಅಬ್ಬರಕ್ಕೆ 15ರ ಬಾಲಕ ಸೇರಿದಂತೆ ಮೂವರ ಬಲಿ
ಲಕ್ನೋ,ಮೇ 9: ಬೃಜ್ ಪ್ರದೇಶದಲ್ಲಿ ಬುಧವಾರ ಗುಡುಗು-ಮಿಂಚಿನ ಮಳೆಯ ಆರ್ಭಟಕ್ಕೆ ಹದಿಹರೆಯದ ಬಾಲಕ ಸೇರಿದಂತೆ ಮೂವರು ಬಲಿಯಾಗಿದ್ದಾರೆ.
ಮಥುರಾ ಜಿಲ್ಲೆಯ ಮಂತ್ ತಾಲೂಕಿನಲ್ಲಿ ಮುರಿದು ಬಿದ್ದಿದ್ದ ವಿದ್ಯುತ್ ಕಂಬವನ್ನು ಸ್ಪರ್ಶಿಸಿ ಶಕುಂತಲಾ ಸಿಂಗ್(55) ಮೃತಪಟ್ಟರೆ,ಸಮೀಪದ ಖಂಜರಾ ಬನ್ಸ್ ಗ್ರಾಮದಲ್ಲಿ ಭಾರೀ ವೇಗದಿಂದ ಬೀಸಿದ ಗಾಳಿಯಿಂದಾಗಿ ಟ್ರಾಕ್ಟರ್ ಪಲ್ಟಿಯಾಗಿ ಭಗವತಿ ಸಿಂಗ್(38) ಸಾವನ್ನಪ್ಪಿದ್ದಾರೆ. ಹತ್ರಾಸ್ ಜಿಲ್ಲೆಯ ಮೊಹಬ್ಬತಪುರದಲ್ಲಿ ಸಿಡಿಲು ಬಡಿದು 15ರ ಹರೆಯದ ಬಾಲಕ ಮೃತಪಟ್ಟಿದ್ದಾನೆ.
ಹವಾಮಾನ ಮುನ್ಸೂಚನೆಯಂತೆ ಸಿಡಿಲಿನಿಂದ ಕೂಡಿದ ಭಾರೀ ಮಳೆಯನ್ನು ಎದುರಿಸಲು ಬೃಜ್ ಪ್ರದೇಶವು ಮಂಗಳವಾರ ಸಜ್ಜಾಗಿತ್ತಾದರೂ ಸಂದರ್ಭ ಬಂದಿದ್ದು ಬುಧವಾರ ಸಂಜೆ. ಬಲವಾದ ಗಾಳಿಯ ಜೊತೆಗೆ ಭಾರೀ ಮಳೆಯಾಗಿದೆ. ಮಥುರಾದ ಕೆಲವು ಭಾಗಗಳು,ಆಗ್ರಾ ಮತ್ತು ಇಟಾ ಜಿಲ್ಲೆಗಳಲ್ಲೂ ಮಳೆಯಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ ನಿಖರವಲ್ಲದ ಹವಾಮಾನ ಮುನ್ಸೂಚನೆಗಳನ್ನು ನೀಡುತ್ತಿರುವುದಕ್ಕಾಗಿ ಭಾರತೀಯ ಹವಾಮಾನ ಇಲಾಖೆಯ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.
ಮೇ 2ರಂದು ಸುರಿದಿದ್ದ ಭಾರೀ ಮಳೆಗೆ ಆಗ್ರಾ ಜಿಲ್ಲೆಯಲ್ಲಿ 50 ಜನರು ಸಾವನ್ನಪ್ಪಿದ್ದರು. ಅದಕ್ಕೂ ಮುನ್ನ ಎ.11ರಂದು ಸುರಿದಿದ್ದ ಭಾರೀ ಮಳೆ 15 ಜೀವಗಳನ್ನು ಬಲಿ ತೆಗೆದುಕೊಂಡಿತ್ತು.