×
Ad

ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೆ ಪ್ರಧಾನಿಗೆ ಬಿಡುವಿಲ್ಲ: ಸುಪ್ರೀಂ ಕೋರ್ಟ್ ಹೇಳಿದ್ದೇನು ಗೊತ್ತೇ?

Update: 2018-05-10 20:50 IST

ಹೊಸದಿಲ್ಲಿ, ಮೇ 10: ನೇತಾರರು ತಮ್ಮ ಕಾರುಗಳಲ್ಲಿ ಕೆಂಪು ದೀಪ ಅಳವಡಿಸುವುದನ್ನು ರದ್ದುಗೊಳಿಸಿದ ಬಳಿಕ ಸುಪ್ರೀಂ ಕೋರ್ಟ್, ವಿವಿಐಪಿ ಉದ್ಘಾಟನೆ ರದ್ದುಗೊಳಿಸುವ ಉದ್ದೇಶದಿಂದ ಗುರುವಾರ ಆದೇಶವೊಂದನ್ನು ನೀಡಿದೆ. ಬಹು ನಿರೀಕ್ಷಿತ ಪೂರ್ವ ಪೆರಿಪೆರಲ್ ಎಕ್ಸ್‌ಪ್ರೆಸ್ ವೇಯನ್ನು ಒಂದು ದಿನವೂ ತಡವಾಗದಂತೆ ಮೇ 31ರ ಒಳಗೆ ಉದ್ಘಾಟಿಸಬೇಕು ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

135 ಕಿ.ಮೀ. ಉದ್ದವಿರುವ ಎಕ್ಸ್‌ಪ್ರೆಸ್ ವೇಯನ್ನು ಎಪ್ರಿಲ್ 20ರಂದು ಉದ್ಘಾಟಿಸಲಾಗುವುದು ಎಂದು ಈ ಹಿಂದೆ ಪ್ರಾಧಿಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಆದರೆ, ಆ ದಿನಾಂಕ ಕಳೆದಿರುವುದರಿಂದ ಪ್ರಾಧಿಕಾರ ನೀಡಿದ ಭರವಸೆ ಈಡೇರಿಲ್ಲ. ಅನಂತರ ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರಿಲ್ 29ರಂದು ಉದ್ಘಾಟಿಸಲಿದ್ದಾರೆ ಎಂದು ಎನ್‌ಎಚ್‌ಎಐ ಸಮಾಲೋಚಕರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಆದರೆ, ಆ ಬದ್ಧತೆಯನ್ನು ಕೂಡ ಎನ್‌ಎಚ್‌ಎಐ ಈಡೇರಿಸಿಲ್ಲ. ಈ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿರುವ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್ ಹಾಗೂ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪೀಠ, ಎಕ್ಸ್‌ಪ್ರೆಸ್ ವೇಯ ಉದ್ಘಾಟನೆಯನ್ನು ಮೇ 31 ಅಥವಾ ಅದರ ಮೊದಲು ನೆರವೇರಿಸದೇ ಇದ್ದರೆ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News