ಹಿಂಸೆ ತ್ಯಜಿಸಿ ಮನೆಗೆ ಮರಳಿ ಬನ್ನಿ : ಸಹಚರರಿಗೆ ಬಂಧಿತ ಉಗ್ರನ ಕರೆ
ಶ್ರೀನಗರ, ಮೇ 10: ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮೂವರು ನಾಗರಿಕರ ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಉಗ್ರನೋರ್ವ ತನ್ನ ಸಹಚರರಿಗೆ ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯ ವಾಹಿನಿಗೆ ಮರಳಿ ಬನ್ನಿ ಎಂದು ಕರೆ ನೀಡಿರುವ ಘಟನೆಯ ವೀಡಿಯೊ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಲಷ್ಕರೆ ತಯ್ಯಿಬ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿರುವ ಇಜಾಝ್ ಅಹ್ಮದ್ ಗೋಜ್ರಿ ಹಾಗೂ ಇತರ 9 ಮಂದಿ ಉಗ್ರರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಆತನನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತನ ಕೋರಿಕೆಯ ಮೇರೆಗೆ ಈ ವೀಡಿಯೊ ಸಂದೇಶ ಚಿತ್ರೀಕರಿಸಲಾಗಿದೆ ಎಂದು ಬಾರಾಮುಲ್ಲಾದ ಹಿರಿಯ ಪೊಲೀಸ್ ಅಧೀಕ್ಷಕ ಇಮ್ತಿಯಾಝ್ ಹುಸೈನ್ ತಿಳಿಸಿದ್ದಾರೆ.
ಈಗ ತಪ್ಪು ದಾರಿಯಲ್ಲಿ ಸಾಗುತ್ತಿರುವ ನನ್ನ ಸಹೋದ್ಯೋಗಿಗಳಾದ ಸುಹೈಬ್ ಫರೂಕ್, ಮೊಹ್ಸಿನ್ ಭಟ್ ಹಾಗೂ ನಾಸಿರ್ ಅಮೀನ್ ದರ್ಝಿ- ಇವರೆಲ್ಲಾ ಮನೆಗೆ ಮರಳಿಬರಬೇಕು ಎಂದು ಕೋರುತ್ತೇನೆ. ಉತ್ತಮ ಜೀವನವನ್ನು ಅರಸಿಕೊಂಡು ಮನೆಬಿಟ್ಟು ತೆರಳಿದ್ದ ಇವರೆಲ್ಲಾ ಸ್ವೀಕಾರ ಯೋಗ್ಯವಲ್ಲದ ಬದುಕನ್ನು ಆಯ್ದುಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ನಾವೆಲ್ಲಾ ಕಾಡು ಮೇಡುಗಳಲ್ಲಿ ಅಂಡಲೆದಿದ್ದೇವೆ. ನಿಮ್ಮ ಪೋಷಕರಿಗಾಗಿ ಈಗಲಾದರೂ ಮನೆಗೆ ಮರಳಿ ಬನ್ನಿ. ನಾಸಿರ್‌ನ ತಾಯಿ ತೀವ್ರ ಅಸೌಖ್ಯದಿಂದಿದ್ದು ಆತ ತಕ್ಷಣ ಮನೆಗೆ ಬರಲೇಬೇಕು. ಎಲ್ಲರೂ ಮನೆಗೆ ಮರಳಿ ಬನ್ನಿ ಎಂದು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾನೆ.
ಅಲ್ಲದೆ ಭಾರತೀಯ ಸೇನೆಯ ಬಗ್ಗೆಯೂ ಗೋಜ್ರಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ತನ್ನ ಬಂಧನವಾಗುವ ಮೊದಲು ಪಾಕಿಸ್ತಾನದ ಗಡಿಯಲ್ಲಿರುವ ತಂಡದ ನಾಯಕರು ಭಾರತೀಯ ಸೇನೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಆದರೆ ಇದು ಸತ್ಯವಲ್ಲ. ಇದೊಂದು ಪಿತೂರಿಯಾಗಿದೆ. ಅವರು ನಮ್ಮ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ. ಭಾರತೀಯ ಯೋಧರನ್ನು ಭೇಟಿಯಾದರೆ ಇದು ನಿಮಗೇ ತಿಳಿಯುತ್ತದೆ ಎಂದು ಸಂದೇಶದಲ್ಲಿ ತಿಳಿಸಿದ್ದಾನೆ. ಸೇನೆಯೊಂದಿಗೆ ನಡೆದ ಮುಖಾಮುಖಿಯ ಸಂದರ್ಭ ನಾವು ಪರಾರಿಯಾಗಲು ಯತ್ನಿಸಿದೆವು. ಹೊಸದಾಗಿ ಸೇರ್ಪಡೆಗೊಂಡಿದ್ದ ಹುಡುಗ ಬಿಲಾಲ್ ಅಹ್ಮದ್ ಕೂಡಾ ನಮ್ಮೊಂದಿಗಿದ್ದ. ನಾವು ಯೋಧರತ್ತ ಗುಂಡು ಹಾರಿಸಿದರೂ ಅವರು ಪ್ರತ್ಯುತ್ತರ ನೀಡಲಿಲ್ಲ. ನಾನು ಓಡಿ ಹೋಗಿ ಪೊದೆಯೊಂದರಲ್ಲಿ ಅವಿತು ಕುಳಿತಿದ್ದೆ. ಆಗ ಸೇನೆಯ ಯೋಧರು ನನ್ನನ್ನು ಬಂಧಿಸಿದರು. ಅವರಿಗೆ ನಮ್ಮ ಮೇಲೆ ಗುಂಡು ಹಾರಿಸಿ ಕೊಲ್ಲಲು ಎಲ್ಲಾ ಅವಕಾಶವಿತ್ತು. ಆದರೆ ಹಾಗೆ ಮಾಡದೆ , ನನ್ನನ್ನು ಬಂಧಿಸುವ ಮೂಲಕ ಹೊಸ ಬದುಕನ್ನು ನೀಡಿದ್ದಾರೆ ಎಂದು ಗೋಜ್ರಿ ವೀಡಿಯೊದಲ್ಲಿ ತಿಳಿಸಿದ್ದಾನೆ.