×
Ad

ಸಮೀರ್, ಪ್ರಣೀತ್ ಕ್ವಾರ್ಟರ್‌ಫೈನಲ್‌ಗೆ

Update: 2018-05-10 23:58 IST

ಸಿಡ್ನಿ, ಮೇ 10: ಭಾರತದ ಶಟ್ಲರ್‌ಗಳಾದ ಬಿ.ಸಾಯಿ ಪ್ರಣೀತ್ ಹಾಗೂ ಸಮೀರ್ ವರ್ಮ ನೇರ ಗೇಮ್‌ಗಳಿಂದ ಜಯ ಸಾಧಿಸುವುದರೊಂದಿಗೆ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಪ್ರಣೀತ್ ಇಂಡೋನೇಷ್ಯಾದ ಅಹ್ಮದ್ ವೌಲಾನರನ್ನು 21-12, 21-14 ಗೇಮ್‌ಗಳಿಂದ ಮಣಿಸಿದರು.

 ಸಮೀರ್ ಜಪಾನ್‌ನ ತಕುಮಾ ಉಯೆಡಾರನ್ನು 12-16, 21-12 ಗೇಮ್‌ಗಳಿಂದ ಸೋಲಿಸಿದ್ದಾರೆ.

ಪ್ರಣೀತ್ ಮುಂದಿನ ಸುತ್ತಿನಲ್ಲಿ ಇಂಡೋನೇಷ್ಯಾದ ಏಳನೇ ಶ್ರೇಯಾಂಕದ ಲೀ ಚೆವುಕ್ ಯಿಯು ಅವರನ್ನು ಎದುರಿಸಿದರೆ, ಸಮೀರ್ ಚೀನಾದ ಲು ಗ್ವಾಂಗ್‌ಝುರನ್ನು ಎದುರಿಸಲಿದ್ದಾರೆ.

ಭಾರತ ಪುರುಷರ ಡಬಲ್ಸ್ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಮೂರನೇ ಶ್ರೇಯಾಂಕದ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಕೊರಿಯಾದ ಹಿಯುಕ್ ಗಿಯುನ್ ಚೊಯ್ ಹಾಗೂ ಕಿಯುಂಗ್ ಹೂನ್ ಪಾರ್ಕ್ ವಿರುದ್ಧ 21-17, 21-17 ಗೇಮ್‌ಗಳಿಂದ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು.

ಏಳನೇ ಶ್ರೇಯಾಂಕದ ಅರ್ಜುನ್ ಎಂಆರ್ ಹಾಗೂ ರಾಮಚಂದ್ರನ್ ಶ್ಲೋಕ್ ಕೂಡ ಅಂತಿಮ-8ರಲ್ಲಿ ತಮ್ಮ ಸ್ಥಾನ ಖಚಿತಪಡಿಸಿದರು.

ಅರ್ಜುನ್ ಹಾಗೂ ರಾಮಚಂದ್ರನ್ ಜಪಾನ್‌ನ ಜೋಡಿ ಹಿರೊಕಿ ಒಕಮುರಾ ಹಾಗೂ ಮಸಯುಕಿ ಒನೊಡೆರಾರನ್ನು 21-15, 25-23 ಗೇಮ್‌ಗಳಿಂದ ಸೋಲಿಸಿತು. ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಭಾರತದ ವೈಷ್ಣವಿ ರೆಡ್ಡಿ ಚೀನಾದ ಹಾನ್ ಯು ವಿರುದ್ಧ 5-21, 5-21 ನೇರ ಗೇಮ್‌ಗಳಿಂದ ಸೋತಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಶಿವಂ ಶರ್ಮ ಹಾಗೂ ಪೂರ್ವಿಶ್ ರಾಮ್ ಐದನೇ ಶ್ರೇಯಾಂಕದ ಕೊರಿಯಾ ಜೋಡಿ ಸಿಯುಂಗ್ ಸಿಯೊ ಹಾಗೂ ಯುಜುಂಗ್ ವಿರುದ್ಧ 6-21, 13-21 ಗೇಮ್‌ಗಳಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News