ಇಂದು ಚೆನ್ನೈ ಕಿಂಗ್ಸ್- ರಾಜಸ್ಥಾನ ರಾಯಲ್ಸ್ ಹಣಾಹಣಿ
ಜೈಪುರ, ಮೇ 10: ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಹಾದಿಗೆ ಮರಳಿರುವ ರಾಜಸ್ಥಾನ ರಾಯಲ್ಸ್ ತಂಡ ಶುಕ್ರವಾರ ನಡೆಯಲಿರುವ ಐಪಿಎಲ್ ಟ್ವೆಂಟಿ-20 ಟೂರ್ನಿಯ ಮಾಡು-ಮಡಿ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಸತತ ಮೂರು ಸೋಲಿನಿಂದ ಕಂಗಾಲಾಗಿದ್ದ ರಾಜಸ್ಥಾನ ತಂಡ ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 15 ರನ್‌ನಿಂದ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿತ್ತು.
ಆದರೆ, ರಾಜಸ್ಥಾನ ತಂಡ ಮುಂದಿನ ಸುತ್ತಿಗೇರಬೇಕಾದರೆ ತನ್ನ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವುದರೊಂದಿಗೆ ಉಳಿದ 4 ಪಂದ್ಯಗಳನ್ನೂ ಗೆಲ್ಲಲೇಬೇಕಾಗಿದೆ.
ಈ ಹಿಂದೆ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈಗೆ 64 ರನ್‌ನಿಂದ ಸೋತಿದ್ದ ರಾಜಸ್ಥಾನ ತಂಡಕ್ಕೆ ಶುಕ್ರವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಒಂದು ಅವಕಾಶವಾಗಿದೆ.
ರಾಜಸ್ಥಾನ ತಂಡ ಈ ವರ್ಷದ ಐಪಿಎಲ್‌ನಲ್ಲಿ ಈ ತನಕ ಉತ್ತಮ ಪ್ರದರ್ಶನ ನೀಡಿಲ್ಲ. 10 ಪಂದ್ಯಗಳಲ್ಲಿ ಕೇವಲ 8 ಅಂಕ ಗಳಿಸಿರುವ ರಾಜಸ್ಥಾನ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಅಜಿಂಕ್ಯ ರಹಾನೆ ನೇತೃತ್ವದ ರಾಜಸ್ಥಾನ ತಂಡ ಚೆನ್ನೈ ವಿರುದ್ಧ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಚೆನ್ನೈಗೆ ಶರಣಾದರೆ ರಾಜಸ್ಥಾನ ಸವಾಲು ಕೊನೆಗೊಳ್ಳುತ್ತದೆ.
ಆತಿಥೇಯ ರಾಜಸ್ಥಾನ ತವರು ಮೈದಾನದಲ್ಲಿ ಈ ತನಕ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿದೆ. ಶುಕ್ರವಾರದ ನಿರ್ಣಾಯಕ ಪಂದ್ಯದಲ್ಲಿ ಈ ದಾಖಲೆ ತಂಡಕ್ಕೆ ನೆರವಾಗಬಹುದು.
ಈ ಋತುವಿನಲ್ಲಿ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗಳ ಕಳಪೆ ಪ್ರದರ್ಶನ ರಾಯಲ್ಸ್ ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ. ನಾಯಕ ರಹಾನೆ ಹಾಗೂ ಸಂಜು ಸ್ಯಾಮ್ಸನ್ ಸಾಧಾರಣ ಪ್ರದರ್ಶನ ನೀಡಿದರೆ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ರಾಹುಲ್ ತ್ರಿಪಾಠಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಬಲಿಷ್ಠ ಚೆನ್ನೈ ವಿರುದ್ಧ ಮೇಲುಗೈ ಸಾಧಿಸಬೇಕಾದರೆ ಆತಿಥೇಯ ರಾಯಲ್ಸ್ ಒಗ್ಗಟ್ಟಿನ ಪ್ರದರ್ಶನ ನೀಡಬೇಕಾಗಿದೆ.
ಪಂಜಾಬ್ ವಿರುದ್ಧ ಕಳೆದ ಪಂದ್ಯದಲ್ಲಿ 58 ಎಸೆತಗಳಲ್ಲಿ 82 ರನ್ ಗಳಿಸಿದ್ದ ಇಂಗ್ಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಆತಿಥೇಯರು 8 ವಿಕೆಟ್‌ಗೆ 158 ರನ್ ಗಳಿಸಲು ನೆರವಾಗಿದ್ದರು. ಬಿಗಿ ಬೌಲಿಂಗ್ ದಾಳಿ ನಡೆಸಿದ ಬೌಲರ್‌ಗಳಾದ ಕೃಷ್ಣಪ್ಪ ಗೌತಮ್,ಕಿವೀಸ್ ಸ್ಪಿನ್ನರ್ ಐಶ್ ಸೋಧಿ ಹಾಗೂ ಜೋಫ್ರಾ ಅರ್ಚರ್ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು.
ಮತ್ತೊಂದೆಡೆ ಚೆನ್ನೈ ತಂಡ 10 ಪಂದ್ಯಗಳಲ್ಲಿ 14 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಉಳಿದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಪ್ಲೇ-ಆಫ್ ಸ್ಥಾನ ಖಚಿತವಾಗಲಿದೆ. ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ವಾಪಸಾಗಿರುವ ಚೆನ್ನೈ ಎಂ.ಎಸ್. ಧೋನಿಯವರ ಸಮರ್ಥ ನಾಯಕತ್ವದಲ್ಲಿ ಇದೀಗ ಭರ್ಜರಿ ಫಾರ್ಮ್‌ನಲ್ಲಿದೆ.
ಮೇ 5 ರಂದು ನಡೆದ ಪಂದ್ಯದಲ್ಲಿ ಆರ್‌ಸಿಬಿಯನ್ನು 9 ವಿಕೆಟ್‌ಗೆ 127 ರನ್‌ಗೆ ನಿಯಂತ್ರಿಸಿದ್ದ ಚೆನ್ನೈ ಬೌಲರ್‌ಗಳು ಕೊನೆಗೂ ಮೊದಲಿನ ಲಯಕ್ಕೆ ವಾಪಸಾಗಿದ್ದರು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ(3-18) ಹಾಗೂ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್(2-22) ಆರ್‌ಸಿಬಿ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದ್ದರು.
ಗಾಯಗೊಂಡಿರುವ ದೀಪಕ್ ಚಹಾರ್ ಅನುಪಸ್ಥಿತಿಯಲ್ಲಿ ತ್ರಿವಳಿ ವೇಗಿಗಳಾದ ಲುಂಗಿ ಗಿಡಿ, ಡೇವಿಡ್ ವಿಲ್ಲಿ ಹಾಗೂ ಶಾರ್ದೂಲ್ ಠಾಕೂರ್ ಜವಾಬ್ದಾರಿಯಿಂದ ಆಡಬೇಕಾಗಿದೆ.
ಚೆನ್ನೈ ಪಾಳಯದಲ್ಲಿ ಅಂಬಟಿ ರಾಯುಡು, ಆಸ್ಟ್ರೇಲಿಯದ ಶೇನ್ ವಾಟ್ಸನ್, ವೆಸ್ಟ್‌ಇಂಡೀಸ್‌ನ ಡ್ವೇಯ್ನ್ ಬ್ರಾವೊ, ನಾಯಕ ಧೋನಿ ಹಾಗೂ ಸುರೇಶ್ ರೈನಾ ಎಲ್ಲರೂ ಕಾಣಿಕೆ ನೀಡುತ್ತಿದ್ದಾರೆ. ರಾಯುಡು ಆರಂಭಿಕ ಆಟಗಾರನಾಗಿಯೂ ಹಾಗೂ 4ನೇ ಕ್ರಮಾಂಕದಲ್ಲೂ ಚೆನ್ನಾಗಿ ಆಡುತ್ತಿದ್ದಾರೆ. 10 ಪಂದ್ಯಗಳಲ್ಲಿ ಒಟ್ಟು 423 ರನ್ ಗಳಿಸಿರುವ ರಾಯುಡು ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ನಾಯಕ ಧೋನಿ ಮೂರು ಅರ್ಧಶತಕಗಳ ಸಹಿತ ಒಟ್ಟು 360 ರನ್ ಗಳಿಸಿ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ.