ಯಾವುದೇ ಕಾಂಗ್ರೆಸ್ ನಾಯಕ ಜೈಲಿನಲ್ಲಿದ್ದ ಭಗತ್ ಸಿಂಗ್ ರನ್ನು ಭೇಟಿಯಾಗಿಲ್ಲ ಎಂದು ಮೋದಿ ಸುಳ್ಳು ಹೇಳಿದರೇ?

Update: 2018-05-11 08:31 GMT

ಬೆಂಗಳೂರು, ಮೇ 11: "ಮಹಾನ್ ನಾಯಕರುಗಳಾದ ಭಗತ್ ಸಿಂಗ್, ಬಟುಕೇಶ್ವರ್ ದತ್ತ್, ವೀರ್ ಸಾವರ್ಕರ್ ರಂತಹವರು ಭಾರತದ ಸ್ವಾತಂತ್ರ್ಯಕ್ಕೆ ಹೋರಾಡುತ್ತಾ ಬ್ರಿಟಿಷರಿಂದ ಜೈಲಿಗೆ ತಳ್ಳಲ್ಪಟ್ಟಿದ್ದಾಗ ಯಾವುದೇ ಕಾಂಗ್ರೆಸ್ ನಾಯಕರು ಭೇಟಿಯಾಗಿದ್ದರೇನು?, ಆದರೆ ಜೈಲು ಶಿಕ್ಷೆಗೊಳಗಾಗಿರುವ ಭ್ರಷ್ಟರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕರು ಹೋಗುತ್ತಾರೆ'' ಎಂದು ಇತ್ತೀಚೆಗೆ ಬೀದರ್ ನಲ್ಲಿ ಚುನಾವಣಾ ರ್ಯಾಲಿಯೊಂದನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಪ್ರಧಾನಿ ಹೇಳಿದಂತೆ ಕಾಂಗ್ರೆಸ್ ನಾಯಕರು ಭಗತ್ ಸಿಂಗ್ ರನ್ನು ಜೈಲಿನಲ್ಲಿ ಭೇಟಿಯಾಗಿರಲಿಲ್ಲವೇ ಎಂದು ಪರಿಶೀಲಿಸಿದಾಗ ಇತಿಹಾಸವರು ಬೇರೆಯದೇ ಉತ್ತರ ನೀಡುತ್ತದೆ. ಈ ಬಗ್ಗೆ Altnews.in ವರದಿ ಮಾಡಿದೆ. 

ಕಾಂಗ್ರೆಸ್ ನಾಯಕರು ಜೈಲು ಶಿಕ್ಷೆಗೊಳಗಾದ ಸ್ವಾತಂತ್ರ್ಯ ಹೋರಾಟಗಾರರನ್ನು ಭೇಟಿಯಾಗಿಲ್ಲವೇ?

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ತಮ್ಮ ಆತ್ಮಚರಿತ್ರೆ "ಟುವರ್ಡ್ ಫ್ರೀಡಂ : ದಿ ಆಟೊಬಯೋಗ್ರಫಿ ಆಫ್ ಜವಾಹರಲಾಲ್ ನೆಹರು'' ಇದರಲ್ಲಿ ತಾವು ಭಗತ್ ಸಿಂಗ್ ರನ್ನು ಲಾಹೋರ್ ಜೈಲಿನಲ್ಲಿ 1929ರಲ್ಲಿ ಭೇಟಿಯಾದ ಬಗ್ಗೆ ಬರೆದಿದ್ದಾರೆ. ದಿಲ್ಲಿಯ ಕೇಂದ್ರ ಅಸೆಂಬ್ಲಿಯಲ್ಲಿ  ಬಾಂಬ್ ಸ್ಫೋಟಗೊಳಿಸಿದ್ದಕ್ಕಾಗಿ ಎಪ್ರಿಲ್ 1929ರಲ್ಲಿ ಭಗತ್ ಸಿಂಗ್ ಹಾಗೂ ಬಟುಕೇಶ್ವರ್ ದತ್ತ್ ಅವರ ಬಂಧನವಾಗಿತ್ತು.

"ಉಪವಾಸ ಸತ್ಯಾಗ್ರಹಕ್ಕೆ ಒಂದು ತಿಂಗಳಾದಾಗ ನನಗೆ ಲಾಹೋರಿನಲ್ಲಿ  ಜೈಲಿನಲ್ಲಿದ್ದ ಕೆಲವರನ್ನು ಭೇಟಿಯಾಗುವ ಅನುಮತಿ ದೊರೆಯಿತು. ಮೊದಲ ಬಾರಿಗೆ ಭಗತ್ ಸಿಂಗ್ ರನ್ನು ನೋಡಿದೆ. ಅದೇ ರೀತಿ ಜತೀಂದ್ರನಾಥ್ ದಾಸ್ ಮತ್ತಿತರರನ್ನು ನೋಡಿದೆ. ಅವರೆಲ್ಲ ಕೃಶವಾಗಿ ಹಾಸಿಗೆ ಹಿಡಿದಿದ್ದರು. ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಭಗತ್ ಸಿಂಗ್ ನೋಡಲು ಆಕರ್ಷಕನಾಗಿದ್ದ, ಶಾಂತ ಚಿತ್ತನಾಗಿದ್ದ. ಆಕ್ರೋಶ ಕಾಣುತ್ತಿರಲಿಲ್ಲ ಸೌಮ್ಯವಾಗಿ ಮಾತನಾಡಿದ. ಒಂದು ತಿಂಗಳು ಉಪವಾಸ ಕೈಗೊಂಡ ಯಾರು ಕೂಡಾ ಇಷ್ಟೇ ಸೌಮ್ಯವಾಗಿರಬಹುದು. ಜತಿನ್ ಕೂಡ ಹುಡುಗಿಯಂತೆ ಸೌಮ್ಯವಾಗಿದ್ದ. ಆತ ನೋವಿನಿಂದ ನರಳುತ್ತಿದ್ದ. ಉಪವಾಸದ 60ನೇ ದಿನದಂದು ಆತ ಸಾವಿಗೀಡಾಗಿದ್ದ'' ಎಂದು ನೆಹರು ಬರೆದಿದ್ದರು.

ನೆಹರು ಜೈಲಿನಲ್ಲಿ ಭಗತ್ ಸಿಂಗ್ ರನ್ನು ಭೇಟಿಯಾಗಿದ್ದನ್ನು 'ದಿ ಟ್ರಿಬ್ಯೂನ್' ಪತ್ರಿಕೆ ಆಗಸ್ಟ್ 9 ಹಾಗೂ 10, 1929ರಲ್ಲಿ ಪ್ರಕಟಿಸಿತ್ತು. ಆಗ ದಿ ಟ್ರಿಬ್ಯೂನ್ ಲಾಹೋರ್ ನಿಂದ ಪ್ರಕಟವಾಗುತ್ತಿತ್ತು

"ಪಂಡಿತ್ ಜವಾಹರಲಾಲ್ ನೆಹರೂ ಅವರು ಡಾ.ಗೋಪಿಚಂದ್, ಎಂಎಲ್‍ಸಿ ಜತೆ ಲಾಹೋರ್ ಕೇಂದ್ರ  ಕಾರಾಗೃಹ ಹಾಗೂ ಬೊರಸ್ಟಲ್ ಜೈಲಿಗೆ ಭೇಟಿ ನೀಡಿ ಉಪವಾಸ ನಿರತರಾಗಿದ್ದವರನ್ನು ಭೇಟಿಯಾಗಿದ್ದರು. ಪಂಡಿತ್ ನೆಹರು ಕೇಂದ್ರ ಕಾರಾಗೃಹದಲ್ಲಿ ಭಗತ್ ಸಿಂಗ್ ಹಾಗೂ ಬಿ.ಕೆ. ದತ್ತ್ ಅವರ ಜತೆ ಮಾತನಾಡಿದರು. ನಂತರ ಬೊರಸ್ಟಲ್ ಜೈಲಿನಲ್ಲಿ ಜತಿನ್ ದಾಸ್, ಅಜೊಯ್ ಘೋಷ್ ಮತ್ತು ಶಿವ್ ವರ್ಮಾ ಅವರನ್ನು ಅಲ್ಲಿನ ಆಸ್ಪತ್ರೆಯಲ್ಲಿ ಭೇಟಿಯಾದರು'' ಎಂದು ಪತ್ರಿಕೆಯಲ್ಲಿ ಬರೆಯಲಾಗಿತ್ತು.

ಆಗಸ್ಟ್ 10, 1929ರ ವರದಿಯಲ್ಲಿ ಪಂಡಿತ್ ನೆಹರು ಅವರು ಉಪವಾಸ ಸತ್ಯಾಗ್ರಹ ನಿರತರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಬಗ್ಗೆ ಬರೆಯಲಾಗಿತ್ತು. 'ಅಂಡರ್ ಸ್ಟಾಂಡಿಂಗ್ ಭಗತ್ ಸಿಂಗ್' ಕೃತಿಕರ್ತ ಹಾಗೂ ಜೆಎನ್‍ಯುವಿನ ನಿವೃತ್ತ ಪ್ರೊಫೆಸರ್ ಚಮನ್ ಲಾಲ್ ಅವರನ್ನು Altnews.in ಮಾತನಾಡಿಸಿದೆ.

"ಭಗತ್ ಸಿಂಗ್ ತಂದೆ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಆತ ಕೂಡ ಕಾಂಗ್ರೆಸ್ ಸಭೆಗಳಲ್ಲಿ ತಂದೆಯೊಂದಿಗೆ ಭಾಗವಹಿಸಿದ್ದ. ಲಾಹೋರ್ ವಿಚಾರಣೆ ವೇಳೆಗೆ ಜವಾಹರಲಾಲ್ ನೆಹರು ಹಾಗೂ ಮೋತಿಲಾಲ್ ನೆಹರು  ಅವರು ಭಗತ್ ಸಿಂಗ್ ನನ್ನು ಹಲವು ಬಾರಿ ಭೇಟಿಯಾಗಿದ್ದರು. ಜೈಲಿನಲ್ಲಿದ್ದ ಕೈದಿಗಳ ಬೇಡಿಕೆ ಪೂರೈಸಲು ಒತ್ತಾಯಿಸಲು ಮೋತಿಲಾಲ್ ನೆಹರು ಸಮಿತಿಯೊಂದನ್ನೂ  ರಚಿಸಿದ್ದರು. ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಜತಿನ್ ದಾಸ್ ಗೆ  ಚಿಕಿತ್ಸೆಯನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ, ವೈದ್ಯರಾಗಿದ್ದ ಡಾ ಗೋಪಿಚಂದ್ ಭಾರ್ಗವ್ ನೀಡುತ್ತಿದ್ದರು. ಅವರು ಆಗಾಗ ಜೈಲಿಗ ಭೇಟಿ ನೀಡುತ್ತಿದ್ದರು. ಭಗತ್ ಸಿಂಗ್ ಹಾಗೂ ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯವಿದ್ದರೂ ಪ್ರಧಾನಿ ಮಂತ್ರಿ ಹೇಳಿದ್ದು ಸತ್ಯ ಅಲ್ಲವೇ ಅಲ್ಲ'' ಎಂದು ಪ್ರೊ ಚಮನ್ ಲಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News