26/11 ಮುಂಬೈ ಭಯೋತ್ಪಾದಕ ದಾಳಿಯ ಹಿಂದೆ ಪಾಕ್ ಉಗ್ರರು: ಪರೋಕ್ಷವಾಗಿ ಒಪ್ಪಿಕೊಂಡ ನವಾಝ್ ಶರೀಫ್

Update: 2018-05-12 18:10 GMT

ಇಸ್ಲಾಮಾಬಾದ್, ಮೇ 12: ಮುಂಬೈ ಭಯೋತ್ಪಾದಕ ದಾಳಿಯನ್ನು ನಡೆಸಿದ ಭಯೋತ್ಪಾದಕರು ಪಾಕಿಸ್ತಾನೀಯರು ಎಂಬುದನ್ನು ಆ ದೇಶದ ಮಾಜಿ ಪ್ರಧಾನಿ ನವಾಝ್ ಶರೀಫ್ ಒಪ್ಪಿಕೊಂಡಿದ್ದಾರೆ ಹಾಗೂ ಇಂಥ ದಾಳಿ ಇನ್ನೊಮ್ಮೆ ನಡೆಯಬಹುದು ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

‘‘ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಅವರು ಯಾವುದೇ ದೇಶಕ್ಕೂ ಸೇರದವರು ಎಂದು ಹೇಳಿ, ಗಡಿ ದಾಟಿ ಮುಂಬೈಗೆ ಹೋಗಿ 150 ಜನರನ್ನು ಕೊಲ್ಲಲು ನಾವು ಅವರಿಗೆ ಅವಕಾಶ ನೀಡಬೇಕೇ? ನನಗೆ ವಿವರಣೆ ಕೊಡಿ. ನಮಗೆ ವಿಚಾರಣೆಯನ್ನು ಪೂರ್ಣಗೊಳಿಸಲು ಯಾಕೆ ಸಾಧ್ಯವಿಲ್ಲ?’’ ಎಂದು ‘ಡಾನ್’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ಈ ಸಂದರ್ಶನವು ಶನಿವಾರ ಪ್ರಕಟವಾಗಿದೆ.

ರಾವಲ್ಪಿಂಡಿ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪಾಕಿಸ್ತಾನಿ ಶಂಕಿತರ ವಿರುದ್ಧದ ವಿಚಾರಣೆಯ ಬಗ್ಗೆ ಅವರು ಈ ಮಾತುಗಳನ್ನು ಹೇಳಿದ್ದಾರೆ ಎಂದು ಭಾವಿಸಲಾಗಿದೆ.

‘‘ದೇಶವಿಲ್ಲದ ವ್ಯಕ್ತಿಗಳಿಗೆ ಗಡಿ ದಾಟಿ ಭಯೋತ್ಪಾದನೆ ನಡೆಸಲು ಅನುಮತಿ ನೀಡುವುದು ಅತ್ಯಂತ ಅಸ್ವೀಕಾರಾರ್ಹ. (ರಶ್ಯ) ಅಧ್ಯಕ್ಷ (ವ್ಲಾದಿಮಿರ್) ಪುಟಿನ್ ಇದನ್ನು ಹೇಳಿದ್ದಾರೆ. (ಚೀನಾ) ಅಧ್ಯಕ್ಷ ಕ್ಸಿ (ಜಿನ್‌ಪಿಂಗ್) ಇದನ್ನು ಹೇಳಿದ್ದಾರೆ’’ ಎಂದರು.

2008 ನವೆಂಬರ್ 26ರಂದು ಲಷ್ಕರೆ ತಯ್ಯಬಕ್ಕೆ ಸೇರಿದ 10 ಭಯೋತ್ಪಾದಕರು ಮುಂಬೈಯಲ್ಲಿ ಮಾರಣಹೋಮ ನಡೆಸಿದ್ದರು. ಆಗ ಶರೀಫ್ ಪ್ರಧಾನಿಯಾಗಿದ್ದರು.

ಸಣ್ಣ ದೋಣಿಯೊಂದರಲ್ಲಿ ಬಂದು ಮುಂಬೈ ಕಡಲ ತೀರದಲ್ಲಿ ಇಳಿದ ಭಯೋತ್ಪಾದಕರು 4 ತಂಡಗಳಾಗಿ ವಿಂಗಡನೆಗೊಂಡು ಮುಂಬೈ ನಗರದಲ್ಲಿ ದಾಳಿ ನಡೆಸಿದ್ದರು. ಈ ಹತ್ಯಾಕಾಂಡದಲ್ಲಿ 166 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಲಷ್ಕರೆ ಮುಖ್ಯಸ್ಥ ಹಫೀಝ್ ಸಯೀದ್ ಸೇರಿದಂತೆ ಈ ದಾಳಿಯ ಸೂತ್ರಧಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕ್ರಮ ತೆಗೆದುಕೊಳ್ಳಲು ಪಾಕಿಸ್ತಾನ ವಿಫಲವಾಗಿದೆ ಎಂಬುದಾಗಿ ಭಾರತ ಆರೋಪಿಸಿದೆ.

ದಾಳಿ ಪಿತೂರಿ ಪಾಕಿಸ್ತಾನದಲ್ಲಿ ರೂಪುಗೊಂಡಿದ್ದು ಹೌದು ಎಂಬುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ, ಆದರೆ, ಅದರಲ್ಲಿ ಪಾಕ್ ಸರಕಾರದ ಶಾಮೀಲಾತಿಯಿಲ್ಲ ಎಂದಿದೆ.

ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿರುವ ಶರೀಫ್‌ರನ್ನು ಆರು ತಿಂಗಳ ಹಿಂದೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News