ನ.25ರಂದು ಸಿಎಟಿ ಪರೀಕ್ಷೆ
ಹೊಸದಿಲ್ಲಿ,ಮೇ 12: ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ)ಗಳಲ್ಲಿ ಎಂಬಿಎ ಕೋರ್ಸಿನ ಪ್ರವೇಶಕ್ಕಾಗಿ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದಾಗಿರುವ ಸಿಎಟಿ(ಕ್ಯಾಟ್) 2018 ನವೆಂಬರ್ 25ರಂದು ನಡೆಯಲಿದೆ.
ಸುಮಾರು 2.5 ಲಕ್ಷ ಎಂಬಿಎ ಆಕಾಂಕ್ಷಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಐಐಎಂ ಲಕ್ನೋ ಈ ಪರೀಕ್ಷೆಯನ್ನು ನವೆಂಬರ್ 26ಕ್ಕೆ ನಡೆಸಿದ್ದು,ಇಬ್ಬರು ಮಹಿಳಾ ಅಭ್ಯರ್ಥಿಗಳು ಮತ್ತು ಮೂವರು ಇಂಜಿನಿಯರಿಂಗೇತರರು ಅಗ್ರ 20 ಸ್ಥಾನಗಳಲ್ಲಿದ್ದರು. 2018ನೇ ಸಾಲಿನ ಕ್ಯಾಟ್ ಪರೀಕ್ಷೆಯನ್ನು ಯಾವ ಐಐಎಂ ನಡೆಸಲಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ಆಗಸ್ಟ್ ಎರಡನೇ ವಾರದಲ್ಲಿ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳುವ ನಿರೀಕ್ಷೆಯಿದೆ.
ಕ್ಯಾಟ್ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಯು ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇ.50(ಎಸ್‌ಸಿ,ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶೇ.45) ಅಂಕಗಳನ್ನು ಅಥವಾ ಸಮಾನ ಸಿಜಿಪಿಎ ಗಳಿಸಿರಬೇಕು.
ಏಳು ವರ್ಷಗಳ ಬಳಿಕ ಕಳೆದ ವರ್ಷ ಪರೀಕ್ಷೆಯನ್ನು ನಡೆಸುವ ಹೊಣೆಗಾರಿಕೆಯನ್ನು ಐಐಎಂ ಲಕ್ನೋಕ್ಕೆ ನೀಡಲಾಗಿತ್ತು. ಪ್ರತಿ ಐಐಎಂ ಪರೀಕ್ಷೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತದೆ.