×
Ad

ಮೇ 30-31ರಂದು ಬ್ಯಾಂಕ್ ನೌಕರರಿಂದ ರಾಷ್ಟ್ರವ್ಯಾಪಿ ಮುಷ್ಕರ

Update: 2018-05-12 21:05 IST

ಹೊಸದಿಲ್ಲಿ,ಮೇ 12: ವೇತನ ಪರಿಷ್ಕರಣೆಗೆ ಆಗ್ರಹಿಸಿ, ಮೇ 30-31ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಖಾಸಗಿ ಹಾಗೂ ಸಾರ್ವಜನಿಕ ರಂಗದ ಬ್ಯಾಂಕ್ ನೌಕರರ ಒಕ್ಕೂಟಗಳು ಶನಿವಾರ ಘೋಷಿಸಿವೆ. ಸರಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿರುವ 10 ಲಕ್ಷಕ್ಕೂ ಅಧಿಕ ಉದ್ಯೋಗಿಗಳು, ಮೇ 30ರಿಂದ 48 ತಾಸುಗಳ ಮುಷ್ಕರ ನಡೆಸಲಿದ್ದಾರೆಂದು ಅಖಿಲ ಭಾರತ ಬ್ಯಾಂಕ್ ನನೌಕರರ ಸಂಘ (ಎಐಬಿಇಎ)ದ ನಾಯಕರು ತಿಳಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿದೆ.

 ನೌಕರರ ವೇತನದಲ್ಲಿ ಶೇ.2ರಷ್ಟು ಏರಿಕೆ ಮಾಡುವ ಬ್ಯಾಂಕ್‌ಗಳ ನಿರ್ವಹಣಾ ಘಟಕವಾದ ಭಾರತೀಯ ಬ್ಯಾಂಕ್‌ಗಳ ಸಂಘದ ಕೊಡುಗೆಯು ತುಂಬಾ ಜುಜುಬಿಯೆಂದು ಬಣ್ಣಿಸಿರುವ ಎಐಬಿಇಎ ಮುಷ್ಕರವನ್ನು ಘೋಷಿಸಿದೆ. 2017ರ ಮಾರ್ಚ್ 31ರಂದು ಶೇ.2ರಷ್ಟು ವೇತನ ಏರಿಕೆ ಸೇರಿದಂತೆ ಐಬಿಎ ನೀಡಿರುವ ಎರಡು ಪ್ರಸ್ತಾವನೆಗಳು ಅಸ್ವೀಕಾರರ್ಹವೆಂದು ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮೇ 30ರಿಂದ 48 ತಾಸುಗಳ ಮುಷ್ಕರ ನಡೆಸುವ ಬಗ್ಗೆ ಭಾರತೀಯ ಬ್ಯಾಂಕ್‌ಗಳ ಸಂಘ(ಐಬಿಎ) ಹಾಗೂ ಮುಖ್ಯ ಕಾರ್ಮಿಕ ಆಯುಕ್ತ (ಕೇಂದ್ರ)ರಿಗೆ ನೋಟಿಸ್ ನೀಡಲಾಗಿದೆಯೆಂದು ಎಐಬಿಇಎ ವೆಂಕಟಾಚಲಂ ತಿಳಿಸಿದ್ದಾರೆ.

 ಯುಎಫ್‌ಬಿಯು, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಓಸಿ), ಎಐಬಿಇಎ, ರಾಷ್ಟ್ರೀಯ ಬ್ಯಾಂಕ್ ಕಾರ್ಮಿಕ ಸಂಘ (ಎನ್‌ಓಬಿಡಬ್ಲು) ಸೇರಿದಂತೆ 9 ಕಾರ್ಮಿಕ ಸಂಸ್ಥೆಗಳ ಒಕ್ಕೂಟವಾಗಿದೆ.

 ಹಣದುಬ್ಬರವು ಅನಿಯಂತ್ರಿತವಾಗಿರುವ ಈ ಸಮಯದಲ್ಲಿ ಶೇ.2ರಷ್ಟು ಅಲ್ಪ ಮೊತ್ತದ ವೇತನ ಹೆಚ್ಚಳದ ಕೊಡುಗೆಯ ಹಿಂದಿರುವ ವೈಚಾರಿಕತೆಯನ್ನೇ ಪ್ರಶ್ನಿಸಿರುವ ಎಐಬಿಓಸಿ ಜಂಟಿ ಪ್ರಧಾನ ಕಾರ್ಯದರ್ಶಿ ರವೀಂದರ್ ಗುಪ್ತಾ ಅವರು, ಬೆಲೆಯೇರಿಕೆ ಅಬಾಧಿತವಾಗಿರುವಾಗ ವೇತನ ಏರಿಕೆಯನ್ನು ತಗ್ಗಿಸುವುದು ಸರಿಯೇ. ಯೋಗ್ಯವಾದ ವೇತನ ಏರಿಕೆಯನ್ನು ತಿರಸ್ಕರಿಸುವುದು ನ್ಯಾಯಸಮ್ಮತವೇ ಎಂದವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News