ಉ.ಭಾರತದ ಗುಡ್ಡಗಾಡು ರಾಜ್ಯಗಳಲ್ಲಿ ನಾಳೆ ಗುಡುಗು-ಸಿಡಿಲು ಮಳೆಯ ಸಾಧ್ಯತೆ:ಐಎಂಡಿ

Update: 2018-05-12 16:12 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮೇ 12: ಮುಂದಿನ ಎರಡು ದಿನಗಳಲ್ಲಿ ಉತ್ತರಾಖಂಡ, ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಮಳೆ ಮತ್ತು ಬಿರುಗಾಳಿಯ ಸಾಧ್ಯತೆಗಳಿವೆ ಎಂದು ಶನಿವಾರ ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ಮುನ್ಸೂಚನೆ ನೀಡಿದೆ.

ಇದೇ ವೇಳೆ ರಾಜಸ್ಥಾನದಲ್ಲಿ ಧೂಳು ಬಿರುಗಾಳಿ ಹಾವಳಿಯೆಬ್ಬಿಸಬಹುದು ಎಂದೂ ಅದು ತಿಳಿಸಿದೆ. ರವಿವಾರದಿಂದ ಪಶ್ಚಿಮದ ಕಡೆಯಿಂದ ಹೊಸದಾಗಿ ಹವಾಮಾನ ವೈಪರೀತ್ಯ ಕಾಣಿಸಿಕೊಳ್ಳಲಿದ್ದು,ಇದರ ಪರಿಣಾಮವಾಗಿ ಈ ಗುಡ್ಡಗಾಡು ರಾಜ್ಯಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಲಿದೆ ಮತ್ತು ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿಯೂ ಪರಿಣಾಮ ಬೀರಲಿದೆ.

 ಮೆಡಿಟರೇನಿಯನ್ ಸಾಗರದಿಂದ ಹುಟ್ಟುವ ಪಶ್ಚಿಮದ ಹವಾಮಾನ ವೈಪರೀತ್ಯವು ಭಾರತದ ವಾಯುವ್ಯ ಪ್ರದೇಶಗಳಲ್ಲಿ ದಿಢೀರ್ ಮಳೆಯನ್ನು ಸುರಿಸುತ್ತದೆ.

ಪೂರ್ವ ಉತ್ತರ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ,ಮಿರೆರಾಂ,ತ್ರಿಪುರಾ,ಭಾಗಶಃ ಪಶ್ಚಿಮ ಬಂಗಾಳ,ಒಡಿಶಾ ಮತ್ತು ಜಾರ್ಖಂಡ್‌ಗಳಲ್ಲಿ ಅಲ್ಲಲ್ಲಿ ಗುಡುಗು ಸಿಡಿಲಿನ ಮಳೆಯೊಂದಿಗೆ ಬಿರುಗಾಳಿಯಿರಲಿದ್ದು,ಗಾಳಿಯು ಪ್ರತಿ ಘಂಟೆಗೆ 50-70 ಕಿ.ಮೀ.ವೇಗದಲ್ಲಿ ಬೀಸಲಿದೆ ಎಂದು ಐಎಂಡಿ ತಿಳಿಸಿದೆ.

ದಕ್ಷಿಣ ಒಳ ಕರ್ನಾಟಕ,ತೆಲಂಗಾಣ,ಭಾಗಶಃ ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ಕೇರಳ, ಲಕ್ಷದ್ವೀಪ, ಪಂಜಾಬ್, ಹರ್ಯಾಣ,ಚಂಡಿಗಡ,ದಿಲ್ಲಿ,ಪಶ್ಚಿಮ ಉತ್ತರ ಪ್ರದೇಶ, ವಿದರ್ಭ, ಛತ್ತೀಸ್‌ಗಡ ಮತ್ತು ಬಿಹಾರಗಳಲ್ಲಿಯೂ ಗುಡುಗು ಸಿಡಿಲಿನ ಮಳೆ ಮತ್ತು ಗಾಳಿಯ ಆರ್ಭಟದ ಸಾಧ್ಯತೆಗಳಿವೆ ಎಂದು ಅದು ಹೇಳಿದೆ.

ರಾಜಸ್ಥಾನ,ಪಶ್ಚಿಮ ಮಧ್ಯಪ್ರದೇಶ ಮತ್ತು ವಿದರ್ಭಗಳಲ್ಲಿ ಒಂಡೆರಡು ಕಡೆ ಉಷ್ಣ ಮಾರುತ ಬೀಸುವ ಸಾಧ್ಯತೆ ಹೆಚ್ಚಾಗಿದೆ ಎಂದೂ ಐಎಂಡಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News