ರಾಯುಡು ಶತಕ: ಚೆನ್ನೈಗೆ ಜಯ
ಪುಣೆ, ಮೇ 13: ಅಂಬಟಿ ರಾಯುಡು ದಾಖಲಿಸಿದ ಸೊಗಸಾದ ಶತಕದ ನೆರವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನ 46ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 180 ರನ್‌ಗಳ ಸವಾಲನ್ನು ಪಡೆದ ಚೆನ್ನೈ ತಂಡ ಆರಂಭಿಕ ದಾಂಡಿಗರಾದ ರಾಯುಡು ಶತಕ ಮತ್ತು ಶೇನ್ ವಾಟ್ಸನ್ ಅರ್ಧಶತಕದ ನೆರವಿನಲ್ಲಿ ಇನ್ನೂ 1 ಓವರ್ ಬಾಕಿ ಇರುವಾಗಲೇ ಅಗತ್ಯದ ರನ್ ಸೇರಿಸಿ ಗೆಲುವಿನ ದಡ ಸೇರಿತು.
ರಾಯುಡು ಔಟಾಗದೆ 100 ರನ್(62ಎ, 7ಬೌ,7ಸಿ) , ವಾಟ್ಸನ್ 57 ರನ್(35ಎ, 5ಬೌ,3ಸಿ), ಮಹೇಂದ್ರ ಸಿಂಗ್ ಧೋನಿ ಔಟಾಗದೆ 20 ರನ್(14ಎ, 1ಬೌ,1ಸಿ) ಗಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 179 ರನ್ ಗಳಿಸಿತ್ತು. ಆರಂಭಿಕ ದಾಂಡಿಗ ಶಿಖರ್ ಧವನ್ 79ರನ್(49ಎ, 10ಬೌ,3ಸಿ), ನಾಯಕ ಕೇನ್ ವಿಲಿಯಮ್ಸನ್ 51ರನ್(39ಎ, 5ಬೌ,2ಸಿ), ದೀಪಕ್ ಹೂಡಾ ಔಟಾಗದೆ 21 ರನ್ ಗಳಿಸಿದರು.
ಚೆನ್ನೈ ತಂಡದ ಶಾರ್ದುಲ್ ಠಾಕೂರ್ 32ಕ್ಕೆ 2 ವಿಕೆಟ್ ಪಡೆದರು.