ಔಷಧಿಗಳನ್ನು ಸುರಕ್ಷಿತವಾಗಿಡುವುದು ಹೇಗೆ...?

Update: 2018-05-13 15:54 GMT

ಮನೆಯಲ್ಲಿ ಔಷಧಿಗಳನ್ನು ನೀವು ಸಾಮಾನ್ಯವಾಗಿ ಎಲ್ಲಿ ಇಡುತ್ತೀರಿ? ಸುಲಭವಾಗಿ ನೆನಪಾಗುತ್ತದೆ ಎಂಬ ಕಾರಣಕ್ಕೆ ಅಡುಗೆಮನೆಯಲ್ಲಿ ಅಥವಾ ಮನೆಯ ಹಾಲ್‌ನಲ್ಲಿ ಇಡುತ್ತೀರಾ ಅಥವಾ ‘ಕೂಲ್ ಆ್ಯಂಡ್ ಡ್ರೈ’ ಸ್ಥಳವೆಂದು ಭಾವಿಸಿ ಬಾತ್‌ರೂಮ್‌ನ ಕ್ಯಾಬಿನೆಟ್‌ನಲ್ಲಿ ಇಡುತ್ತೀರಾ?

ಇದಕ್ಕೆ ಉತ್ತರ ಹೌದು ಎಂದಾದರೆ ಅತ್ಯಂತ ದೊಡ್ಡ ತಪ್ಪನ್ನು ನೀವು ಮಾಡುತ್ತಿದ್ದೀರಿ. ಹೆಚ್ಚು ಉಷ್ಣಾಂಶ ಅಥವಾ ಹೆಚ್ಚು ತೇವಾಂಶವಿರುವ ಸ್ಥಳಗಳಲ್ಲಿ ಔಷಧಿಗಳನ್ನು ಇಡುವುದರಿಂದ ಅವು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ.  ಔಷಧಿಗಳು ರಾಸಾಯನಿಕಗಳಾಗಿದ್ದು,ಅವುಗಳ ರಾಸಾಯನಿಕ ಸಂರಚನೆಯಲ್ಲಿ ಯಾವುದೇ ಬದಲಾವಣೆಗಳನ್ನು ತಡೆಯಲು ಅವುಗಳನ್ನು ನೇರ ತಾಪ,ಬಿಸಿಲು ಅಥವಾ ತೇವಗಳಿಂದ ದೂರವಿರಿಸಬೇಕು. ಔಷಧಿಗಳು ಪರಿಣಾಮಕಾರಿಯಾಗಿರಲು ಮತ್ತು ಸುರಕ್ಷಿತವಾಗಿರಲು ಅವುಗಳನ್ನು ಸೂಕ್ತ ಸ್ಥಳದಲ್ಲಿ ದಾಸ್ತಾನಿರಿಸುವುದು ಅಗತ್ಯವಾಗಿದೆ.

ಹೆಚ್ಚಿನ ಔಷಧಿಗಳನ್ನು ಕೋಣೆಯ ತಾಪಮಾನದಲ್ಲಿ,ನೇರ ಬಿಸಿಲಿನಿಂದ ದೂರವಾಗಿ ತಂಪು ಮತ್ತು ಒಣ ಜಾಗದಲ್ಲಿ ದಾಸ್ತಾನಿರಿಸಲಾಗುತ್ತದೆ. ಮಕ್ಕಳು ಆಕಸ್ಮಿಕವಾಗಿ ಸೇವಿಸುವುದನ್ನು ತಡೆಯಲು ಮಾತ್ರೆಗಳು ಮತ್ತು ಸಿರಪ್‌ಗಳನ್ನು ಅವರ ಕೈಗೆ ಸಿಗದಂತೆ ಇರಿಸುವುದೂ ಮುಖ್ಯವಾಗಿದೆ.ಹತ್ತಿ,ಪ್ಲಾಸ್ಟಿಕ್ ಅಥವಾ ಕಾಗದ ಇತ್ಯಾದಿಗಳನ್ನು ಮಾತ್ರೆಗಳ ಬಾಟ್ಲಿಗಳಲ್ಲಿ ತುಂಬಿಸಬೇಡಿ,ಹಾಗೆ ಮಾಡುವುದರಿಂದ ಔಷಧಿಯ ಸಾಮರ್ಥ್ಯ ಕುಂದುತ್ತದೆ.

ಔಷಧಿಗಳನ್ನು ಯಾವ ಉಷ್ಣತೆಯಲ್ಲಿರಿಸಬೇಕು ಎನ್ನುವುದೂ ಮುಖ್ಯವಾಗಿದೆ. ಹೀಗಾಗಿ ಔಷಧಿಗಳ ಪ್ಯಾಕೇಜಿಂಗ್ ಮೇಲಿರುವ ನಿರ್ದೇಶಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಹೆಚ್ಚಿನ ಪ್ರಕರಣಗಳಲ್ಲಿ ಔಷಧಿಗಳನ್ನು ಕೋಣೆಯ ತಾಪಮಾನದಲ್ಲಿ ಅಂದರೆ 25 ಡಿ.ಸೆಂಟಿಗ್ರೇಡ್‌ನ ಆಸುಪಾಸಿನ ಉಷ್ಣತೆಯಲ್ಲಿ ಇರಿಸುವಂತೆ ಸೂಚಿಸಲಾಗಿರುತ್ತದೆ. ಆದರೆ ಕೆಲವು ಔಷಧಿಗಳನ್ನು ಫ್ರಿಝ್‌ನಲ್ಲಿ ಇರಿಸುವುದು ಅಗತ್ಯವಾಗಬಹುದು. ಲಸಿಕೆಗಳು ಮತ್ತು ಇನ್ಸುಲಿನ್‌ನಂತಹ ಚುಚ್ಚುಮದ್ದುಗಳು ಇವುಗಳಲ್ಲಿ ಸೇರುತ್ತವೆ.

ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನಂತೆ ಫ್ರಿಝ್‌ನಲ್ಲಿ ಔಷಧಿಗಳನ್ನು ಇರಿಸುವಾಗ ಉಷ್ಣತೆಯು ಸಾಮಾನ್ಯವಾಗಿ 2ರಿಂದ 8 ಡಿ.ಸೆಂ.ಇರಬೇಕು. ನೆನಪಿನಲ್ಲಿಡಿ,ಔಷಧಿಗಳನ್ನೆಂದೂ ಫ್ರೀಝರ್‌ನಲ್ಲಿ ಇರಿಸಬಾರದು.

 ಮಾತ್ರೆಗಳು ಮತ್ತು ಕ್ಯಾಪ್ಸೂಲ್‌ಗಳು ಸಾಮಾನ್ಯವಾಗಿ ಸ್ಟ್ರಿಪ್‌ಗಳ ರೂಪದಲ್ಲಿರುತ್ತವೆ ಮತ್ತು ಇಂತಹ ಪ್ಯಾಕಿಂಗ್ ಅವುಗಳಲ್ಲಿಯ ಘಟಕಗಳನ್ನು ಉಳಿಸಿಕೊಳ್ಳುವ ಜೊತೆಗೆ ಗಾಳಿ ಮತ್ತು ತೇವದ ವಿರುದ್ಧ ನೈಸರ್ಗಿಕ ರಕ್ಷಣೆಯನ್ನು ನೀಡುತ್ತವೆ. ಕೆಲವೊಮ್ಮೆ ಔಷಧಿಗಳನ್ನು ಇರಿಸಲು ಕಂಪಾರ್ಟ್‌ಮೆಂಟ್‌ಗಳಿರುವ ಪಿಲ್ ಬಾಕ್ಸ್‌ಗಳನ್ನು ಬಳಸಲಾಗುತ್ತದೆ. ಈ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರತಿಯೊಂದು ದಿನವು ಮುದ್ರಿತವಾಗಿದ್ದು,ನಿಯಮಿತವಾಗಿ ಔಷಧಿ ಸೇವನೆಗೆ ನೆರವಾಗುತ್ತದೆ. ಆದರೆ ಹೆಚ್ಚಿನ ಔಷಧಿಗಳನ್ನು ಅವುಗಳ ಸ್ಟ್ರಿಪ್‌ರಹಿತವಾಗಿ ಈ ಬಾಕ್ಸ್‌ಗಳಲ್ಲಿ ಇರಿಸಲಾಗುತ್ತದೆ ಮತ್ತು ಇದರಿಂದಾಗಿ ಅವು ಗಾಳಿಗೆ ತೆರೆದುಕೊಂಡಿರುತ್ತವೆ. ಅಲ್ಲದೆ ನೈಟ್ರೊಗ್ಲಿಸರಿನ್‌ನಂತಹ ಮಾತ್ರೆಗಳನ್ನು ಪಿಲ್ ಬಾಕ್ಸ್‌ನಲ್ಲಿರಿಸಿದರೆ ಒಂದೇ ವಾರದಲ್ಲಿ ಹಾಳಾಗುತ್ತವೆ ಮತ್ತು ಅಂತಹ ಸ್ಥಿತಿಯಲ್ಲಿ ಅವುಗಳನ್ನೆಂದಿಗೂ ಬಳಸಬಾರದು.

ಇನ್ನೊಂದು ಪ್ರಮುಖವಾದ ಅಂಶವೆಂದರೆ ಔಷಧಿಗಳನ್ನು ಪಿಲ್‌ಬಾಕ್ಸ್‌ನಲ್ಲಿರಿಸುವುದರಿಂದ ಅವುಗಳ ಮುಕ್ತಾಯ ದಿನಾಂಕಗಳು ನಮಗೆ ಗೊತ್ತಾಗದಿರುವ ಹೆಚ್ಚಿನ ಸಾಧ್ಯತೆಗಳಿವೆ. ಹೀಗಾಗಿ ಪಿಲ್‌ಬಾಕ್ಸ್‌ನಲ್ಲಿರಿಸುವ ಮುನ್ನ ಔಷಧಿಗಳ ಮುಕ್ತಾಯ ದಿನಾಂಕಗಳನ್ನು ಬರೆದಿಟ್ಟುಕೊಳ್ಳುವುದು ಒಳ್ಳೆಯದು.

ಸಿರಪ್ ಬಾಟ್ಲಿಗಳ ಲೇಬಲ್‌ಗಳ ಮೇಲೆ ನಿರ್ದಿಷ್ಟವಾಗಿ ಏನನ್ನೂ ಸೂಚಿಸಿರದಿದ್ದರೆ ಅವುಗಳನ್ನು ಸದಾ ಸೂರ್ಯನ ಬಿಸಿಲಿನಿಂದ ದೂರ ಮತ್ತು ಕೋಣೆಯ ಉಷ್ಣತೆಯಲ್ಲಿರಿಸಬೇಕು. ಬಾಟ್ಲಿಗಳ ಮುಚ್ಚಳಗಳನ್ನು ಸರಿಯಾಗಿ ಹಾಕದಿದ್ದರೆ ಗಾಳಿ ಮತ್ತು ತೇವಾಂಶಗಳಿಂದಾಗಿ ಸಿರಪ್ ಹಾಳಾಗುವ ಸಾಧ್ಯತೆಯಿರುತ್ತದೆ. ಅಲ್ಲದೆ ಔಷಧಿಗಳು ಮತ್ತು ಸಿರಪ್ ತುಂಬಿದ ಬಾಟ್ಲಿಗಳನ್ನು ಆಗಾಗ್ಗೆ ತೆರೆಯುತ್ತಿರಬಾರದು.

ಕೆಲವೊಮ್ಮೆ ಸಿರಪ್‌ಗಳಿಗೆ ನೀರನ್ನು ಸೇರಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಇದನ್ನು ಫ್ರಿಝ್‌ನಲ್ಲಿ ಇರಿಸಲಾಗುತ್ತದೆ. ಆದರೆ ಅವುಗಳನ್ನು ಸೂಕ್ತವಾಗಿ ದಾಸ್ತಾನಿರಿಸುವ ಬಗ್ಗೆ ಬಾಟ್ಲಿಗಳ ಮೇಲಿನ ಸೂಚನೆಗಳನ್ನು ಸರಿಯಾಗಿ ಓದಿಕೊಳ್ಳಬೇಕಕು. ಅಲ್ಲದೆ ಇಂತಹ ಸಿರಪ್ ಸಿದ್ಧಗೊಳಿಸಿ ತುಂಬ ದಿನಗಳಾಗಿದ್ದರೆ ಫ್ರಿಝ್‌ನಲ್ಲಿರಿಸಿದ್ದರೂ ಉಪಯೋಗಿಸಬಾರದು. ಹೆಚ್ಚೆಂದರೆ ಒಂದು ವಾರದೊಳಗೆ ಅವುಗಳನ್ನು ಸೇವಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News