ಇಚ್ಥಿಯೊಸಿಸ್ ಎಂದರೇನು? ಈ ಅಪರೂಪದ ರೋಗದ ಬಗ್ಗೆ ಇಲ್ಲಿದೆ ಮಾಹಿತಿ...

Update: 2018-05-13 16:09 GMT

ಶರೀರದ ವಿವಿಧ ಅಂಗಾಂಗಗಳಿಗೆ ಸಂಬಂಧಿಸಿದ ವಂಶವಾಹಿ ರೋಗಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿವೆ. ಇಚ್ಥಿಯೊಸಿಸ್ ಇಂತಹ ರೋಗಗಳಲ್ಲೊಂದಾಗಿದೆ.

 ಇಚ್ಥಿಯೊಸಿಸ್‌ವಿಶ್ವಾದ್ಯಂತ ಯಾವುದೇ ಲಿಂಗ, ವಯಸ್ಸು, ಸ್ಥಳ, ಭೌಗೋಳಿಕ ಸ್ವರೂಪ ಮತ್ತು ಜನಾಂಗ ಭೇದಗಳಿಲ್ಲದೆ ಕಂಡು ಬರುತ್ತಿರುವ ಅಪರೂಪದ ವಂಶವಾಹಿ ರೋಗವಾಗಿದೆ. ಚರ್ಮದ ಮೇಲ್ಮೈಯಲ್ಲಿ ಮೃತ ಚರ್ಮದ ಜೀವಕೋಶಗಳು ಸಂಗ್ರಹಗೊಂಡು ಉಂಟಾಗುವ ಒಣ ಮತ್ತು ದಪ್ಪ ಪೊರೆಯ ರೂಪದ ಹಕ್ಕಳೆಗಳು ಈ ರೋಗದ ವಿಶಿಷ್ಟ ಲಕ್ಷಣವಾಗಿವೆ.

ಈ ಹಕ್ಕಳೆಗಳನ್ನು ಕೆಲವೊಮ್ಮೆ ಮೀನಿನ ಮೈಮೇಲಿರುವ ಹಕ್ಕಳೆಗಳಿಗೆ ಹೋಲಿಸಬಹುದು. ಗ್ರೀಕ್ ಭಾಷೆಯಲ್ಲಿ ಇಚ್ಥಿಸ್ ಎಂದರೆ ಮೀನು ಎಂಬ ಅರ್ಥವಿದೆ. ಹೀಗಾಗಿ ಈ ರೋಗಕ್ಕೆ ಇಚ್ಥಿಯೊಸಿಸ್ ಎಂಬ ಹೆಸರು ಬಂದಿದೆ. ಈ ರೋಗದಲ್ಲಿ ಸುಮಾರು 20 ವಿಧಗಳಿದ್ದು, ಅವುಗಳಿಗನುಗುಣವಾಗಿ ರೋಗದ ತೀವ್ರತೆ ಭಿನ್ನವಾಗಿರುತ್ತದೆ ಮತ್ತು ಲಕ್ಷಣಗಳನ್ನನುಸರಿಸಿ ರೋಗದ ತೀವ್ರತೆಯನ್ನು ನಿರ್ಧರಿಸಲಾಗುತ್ತದೆ.

  ಇವುಗಳ ಪೈಕಿ ಇಚ್ಥಿಯೊಸಿಸ್ ವಲ್ಗರಿಸ್ ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ವಿಧವಾಗಿದೆ. ಪ್ರತಿ 250-300 ಜನರಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುವ ಈ ರೋಗವು ಚರ್ಮವನ್ನು ಒಣಗಿಸುವ ಜೊತೆಗೆ ಅವುಗಳ ಮೇಲೆ ಹಕ್ಕಳೆಗಳನ್ನು ಮುಖ್ಯ ಲಕ್ಷಣವನ್ನಾಗಿ ಹೊಂದಿದೆ. ಒಟ್ಟು ವರದಿಯಾಗಿರುವ ಇಚ್ಥಿಯೊಸಿಸ್ ಪ್ರಕರಣಗಳಲ್ಲಿ ಶೇ.90ಕ್ಕೂ ಅಧಿಕ ಪ್ರಕರಣಗಳು ಇಚ್ಥಿಯೊಸಿಸ್ ವಲ್ಗರಿಸ್‌ನದ್ದಾಗಿವೆ. ಹಲಿಕ್ವಿನ್ ವಿಧದ ಇಚ್ಥಿಯೊಸಿಸ್ ಅತ್ಯಂತ ಅಪರೂಪದ ಮತ್ತು ತೀವ್ರ ಸ್ವರೂಪದ ರೋಗವಾಗಿದೆ. ಅದು ಜನ್ಮದಿಂದಲೇ ಶರೀರದ ಹೆಚ್ಚಿನ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಮಗು ಬೆಳೆಯುತ್ತ ಹೋದಂತೆ ರೋಗವೂ ಬೆಳೆಯುತ್ತಿರುತ್ತದೆ. ಈ ರೋಗವು ದಿನದಿನವೂ ಪ್ರಮುಖವಾಗಿ ಕಣ್ಣುಗುಡ್ಡೆಗಳು, ಕಿವಿಗಳು,ಬಾಯಿ, ಮೂಗು, ತೋಳುಗಳು ಮತ್ತು ಕಾಲುಗಳಲ್ಲಿ ಸಮಸ್ಯೆಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ.

ಸಾಮಾನ್ಯವಾಗಿ ಹೆತ್ತವರಲ್ಲಿ ಒಬ್ಬರ ಅಥವಾ ಇಬ್ಬರ ಮೂಲಕವೂ ಬರುವ ಇಚ್ಥಿಯೊಸಿಸ್ ರೋಗಕ್ಕೆ ದೋಷಪೂರಿತ ವಂಶವಾಹಿಯು ಕಾರಣವಾಗಿದೆ. ಹೆತ್ತವರ ಪೈಕಿ ಒಬ್ಬರ ಮೂಲಕ ಬರುವ ರೋಗವು ಸಾಮಾನ್ಯವಾಗಿ ಸೌಮ್ಯ ಸ್ವರೂಪದ್ದಾಗಿದ್ದರೆ,ತಂದೆ ಮತ್ತು ತಾಯಿಯ ಮೂಲಕ ಅಂತರ್ಗತವಾಗಿರುವ ಎರಡು ದೋಷಪೂರಿತ ವಂಶವಾಹಿಗಳಿರುವ ಪ್ರಕರಣಗಳಲ್ಲಿ ಹೆಚ್ಚು ಗಂಭೀರ ಸ್ವರೂಪ ದ್ದಾಗಿರುತ್ತದೆ.

ಇತರ ಕೆಲವು ಕಾರಣಗಳಿಂದ ಇಚ್ಥಿಯೊಸಿಸ್ ಕಾಣಿಸಿಕೊಳ್ಳುತ್ತದೆ ಯಾದರೂ ಇದು ಅಪರೂಪವಾಗಿದೆ. ಥೈರಾಯ್ಡಿ,ಎಚ್‌ಐವಿ/ಏಡ್ಸ್,ಕ್ಯಾನ್ಸರ್ ಇತ್ಯಾದಿ ರೋಗಗಳು ಮತ್ತು ಔಷಧಿಗಳ ಅಲರ್ಜಿ,ಸೋಂಕು ಮುಂತಾದವುಗಳೂ ಇಚ್ಥಿಯೊಸಿಸ್‌ಗೆ ಕಾರಣವಾಗಬಲ್ಲವು.

ಇಚ್ಥಿಯೊಸಿಸ್ ಚರ್ಮದ ನೈಸರ್ಗಿಕ ಪುನರ್‌ಸೃಷ್ಟಿ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಪರಿಣಾಮವಾಗಿ ಚರ್ಮದ ಮೃತ ಜೀವಕೋಶಗಳು ಸರಿಯಾಗಿ ಉದುರುವುದಿಲ್ಲ ಮತ್ತು ಚರ್ಮದ ಮೇಲೆ ಸಂಗ್ರಹಗೊಂಡು ಒಣ ಮತ್ತು ಹಕ್ಕಳೆ ರೂಪದ ಪೊರೆಯನ್ನುಂಟು ಮಾಡುತ್ತವೆ.

ಈ ಹಕ್ಕಳೆಗಳು ಕಂದು,ಕೆಂಪು,ಬಿಳಿ ಅಥವಾ ಬೂದು ಬಣ್ಣದ್ದೂ ಆಗಿರಬಹುದು. ಚರ್ಮದಲ್ಲಿ ಉಂಟಾಗುವ ಆಳವಾದ ಬಿರುಕುಗಳು ತೀವ್ರವಾದ ನೋವನ್ನುಂಟು ಮಾಡುತ್ತವೆ. ಈ ಲಕ್ಷಣಗಳು ರೋಗಿಯಿಂದ ರೋಗಿಗೆ ಭಿನ್ನವಾಗಿರಬಹುದು. ಸಾಮಾನ್ಯ ಲಕ್ಷಣವೆಂದರೆ ಇಚ್ಥಿಯೊಸಿಸ್ ಸ್ಥಿತಿಯು ಚಳಿಗಾಲದಲ್ಲಿ ತೀವ್ರವಾಗಿ ಹದಗೆಡುತ್ತದೆ ಮತ್ತು ತೇವಾಂಶವುಳ್ಳ ಬೇಸಿಗೆಯ ದಿನಗಳಲ್ಲಿ ಸಹನೀಯ ನೋವನ್ನು ನೀಡುತ್ತದೆ ಮತ್ತು ಈ ದಿನಗಳಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಗುಣವಾಗುವ ಸಾಧ್ಯತೆಗಳೂ ಇವೆ.

ಚರ್ಮವನ್ನು ನೋಡಿದರೇ ಮೇಲ್ನೋಟಕ್ಕೆ ಇದು ಇಚ್ಥಿಯೊಸಿಸ್ ಎನ್ನುವುದು ವೈದ್ಯರಿಗೆ ಗೊತ್ತಾಗುತ್ತದೆ. ದೃಢಪಡಿಸಿಕೊಳ್ಳಲು ಅವರು ಚರ್ಮದ ಬಯಾಪ್ಸಿಗೆ ಸೂಚಿಸಬಹುದು. ಅಲ್ಲದೆ ಕುಟುಂಬದಲ್ಲಿ ಯಾರಿಗಾದರೂ ಹಿಂದೆ ಈ ರೋಗವಿತ್ತೇ ಎನ್ನುವುದನ್ನು ತಿಳಿದುಕೊಳ್ಳುವುದೂ ವೈದ್ಯರ ಪಾಲಿಗೆ ಮುಖ್ಯವಾಗಿರುತ್ತದೆ.

ಇಚ್ಥಿಯೊಸಿಸ್‌ನ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಇಚ್ಥಿಯೊಸಿಸ್ ರೋಗಿಗಳು ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯುವ ಜೊತೆಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದೂ ಅಗತ್ಯವಾಗುತ್ತದೆ. ಉದಾಹರಣೆಗೆ ಸೂಕ್ತ ಕ್ರೀಮ್,ತೈಲ ಇತ್ಯಾದಿಗಳನ್ನು ಹಚ್ಚಿಕೊಳ್ಳುವುದರಿಂದ ಚರ್ಮದಲ್ಲಿ ತೇವಾಂಶ ಹೆಚ್ಚುತ್ತದೆ. ಆದರೆ ಇದು ರೋಗದ ತೀವ್ರತೆ ಮತ್ತು ವೈದ್ಯರ ಸಲಹೆಯನ್ನು ಅವಲಂಬಿಸಿರುತ್ತದೆ.

ಇಚ್ಥಿಯೊಸಿಸ್ ರೋಗಿಗಳು ಸೂರ್ಯನ ಬಿಸಿಲಿನಿಂದ ದೂರವುಳಿ ಯುವುದು ಮುಖ್ಯವಾಗಿದೆ. ಬಿಸಿಲಿನ ತಾಪದಿಂದ ಚರ್ಮವು ಇನ್ನಷ್ಟು ಒಣಗುತ್ತದೆ ಮತ್ತು ರಕ್ತಸ್ರಾವವೂ ಉಂಟಾಗಬಹುದು.

ಅಂದ ಹಾಗೆ ಇಚ್ಥಿಯೊಸಿಸ್ ಮನುಷ್ಯರಲ್ಲಿ ಮಾತ್ರವಲ್ಲ, ನಾಯಿ, ಜಾನುವಾರು ಇತ್ಯಾದಿ ಪ್ರಾಣಿಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News