×
Ad

ಭಾರತ -ಪಾಕಿಸ್ತಾನ ಸ್ನೇಹಿತರಾಗಲು ಸಾಧ್ಯವಿಲ್ಲವೇ?

Update: 2018-05-14 00:31 IST

ಮಾನ್ಯರೆ,

ಕೇವಲ 6-8ತಿಂಗಳ ಹಿಂದೆ ಅಮೆರಿಕ ಮತ್ತು ಉತ್ತರ ಕೊರಿಯಾ ಯುದ್ಧಕ್ಕೆ ಅತ್ಯಂತ ಸನಿಹ ಬಂದಿದ್ದವು ಎಂಬುದನ್ನು ಗಮನಿಸಿದ್ದೇವೆ. ದಕ್ಷಿಣ ಮತ್ತು ಉತ್ತರ ಕೊರಿಯಾ ಯುದ್ಧಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದವು.

ಆಶ್ಚರ್ಯವೆಂದರೆ, ಇತ್ತೀಚೆಗಷ್ಟೇ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಭೇಟಿಯಾಗಿ ಸೌಹಾರ್ದ ಮಾತುಕತೆ ನಡೆಸಿದರು. ಅಸಾಧ್ಯವೆಂದು ಭಾವಿಸಲಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷರ ಭೇಟಿಗೆ ಸಿಂಗಾಪುರದಲ್ಲಿ ಮುಂದಿನ ತಿಂಗಳು ಸಿದ್ಧತೆ ನಡೆದಿದೆ. ಖಂಡಿತ ವಿಶ್ವಶಾಂತಿಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಬೆಳವಣಿಗೆ. ಶ್ರೀಲಂಕಾದ ಸಿಂಹಳೀಯರು ಮತ್ತು ತಮಿಳರು ಅಜನ್ಮ ಶತ್ರುಗಳಂತೆ ಇದ್ದವರು ಎಲ್‌ಟಿಟಿಇ ಅವಸಾನದ ನಂತರ ಈಗ ಸೌಹಾರ್ದಯುತವಾಗಿದ್ದಾರೆ. ಹಾಗಾದರೆ ಸ್ವಾತಂತ್ರಪೂರ್ವದಲ್ಲಿ ಒಟ್ಟಿಗೇ ಇದ್ದು ತದನಂತರ ಬೇರೆ ಬೇರೆಯಾದ ಭಾರತ ಮತ್ತು ಪಾಕಿಸ್ತಾನ ದ್ವೇಷ ಮರೆತು ಒಳ್ಳೆಯ ಸ್ನೇಹಿತರಾಗಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ.
ಕೇವಲ ಧಾರ್ಮಿಕ ಆಚರಣೆಗಳ ಭಿನ್ನತೆಯಿಂದಾಗಿ ಅಣ್ಣ ತಮ್ಮಂದಿರ ನಡುವೆ ವಿಭಜನೆಯಾಗಿದೆ.
ಜಾಗದ ವಿಷಯದ ಕಾರಣಕ್ಕಾಗಿ ಯುದ್ಧವೂ ನಡೆದಿದೆ. ಇದೇ ಕಾರಣಕ್ಕಾಗಿ ಈಗಲೂ ಪರೋಕ್ಷ ಯುದ್ಧ ನಡೆಯುತ್ತಿದೆ.

 ಪಾಕಿಸ್ತಾನ ಭಯೋತ್ಪಾದನೆಯ ದಾಳಿಗೆ ಸಿಲುಕಿ ನಾಶವಾಗುತ್ತಿದೆ. ಅದರ ಪರಿಣಾಮ ಭಾರತದ ಮೇಲೂ ಆಗುತ್ತಿದೆ. ನಾವು ಇದನ್ನು ನಿರ್ಲಕ್ಷಿಸುವಂತಿಲ್ಲ. ವಿಶ್ವವೇ ಸೌಹಾರ್ದೆಡೆಗೆ ಸಾಗುತ್ತಿರುವಾಗ, ಭಾರತ ಅಭಿವೃದ್ಧಿಯ ಬಹುದೊಡ್ಡ ಕನಸು ಕಾಣುತ್ತಿರುವಾಗ ನೆರೆಯ ರಾಷ್ಟ್ರದೊಡನೆ ಉತ್ತಮ ಬಾಂಧವ್ಯ ಹೊಂದಬೇಕಿದೆ. ಅದರೊಡನೆ ಕ್ರೀಡೆ ಸಾಹಿತ್ಯ ಸಂಗೀತ ಸಿನೆಮಾ ಸಾಂಸ್ಕೃತಿಕ ವ್ಯಾಪಾರಗಳ ಸಂಬಂಧ ಏರ್ಪಡಿಸಬೇಕಿದೆ.

 ವಿವೇಕಾನಂದ ಎಚ್.ಕೆ. ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News