ಗಣನೀಯ ಬದಲಾವಣೆ ಸಾಧ್ಯ ವೇ?

Update: 2018-05-13 19:04 GMT

ಮಾನ್ಯರೆ,

ಚುನಾವಣೆಯನ್ನು ಜನತಂತ್ರದ ಹಬ್ಬಗಳು ಎಂದೆಲ್ಲಾ ವರ್ಣಿಸಲಾಗುತ್ತದೆ. ಆದರೆ ಜನರನ್ನು ಹಣಕ್ಕೆ, ಹೆಂಡಕ್ಕೆ, ಜಾತಿಗೆ, ಧರ್ಮಕ್ಕೆ ಸೀಮಿತಗೊಳಿಸುವ ಹಾಗೂ ಇವುಗಳನ್ನು ಬಿಟ್ಟರೆ ಬೇರೆ ಅಸ್ತಿತ್ವವೇ ಇಲ್ಲದಿರುವ ರೋಬೋಟ್ ಎಂದು ಜನರನ್ನು ಪರಿಗಣಿಸುವ ಪ್ರಸ್ತುತ ಚುನಾವಣಾ ವ್ಯವಸ್ಥೆಯಿಂದ ಯಾವ ಗಣನೀಯ ಬದಲಾವಣೆ ಸಾಧ್ಯ? ರಾಜಕಾರಣಿಗಳಿಂದ ಸಾಮಾನ್ಯ ಜನ ಏನನ್ನು ನಿರೀಕ್ಷೆ ಮಾಡಬೇಕು ಎಂಬುದನ್ನೇ ನಮ್ಮ ಬಹುತೇಕ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಮರೆಮಾಚಿವೆ. ಉದಾಹರಣೆಗೆ ಇತ್ತೀಚೆಗೆ ನಾನು ಕಂಡದ್ದನ್ನು ಹೇಳುತ್ತೇನೆ. ಮಧ್ಯವಯಸ್ಸಿನ ಮಹಿಳೆಯೊಬ್ಬರು, ತಮ್ಮ ಕ್ಷೇತ್ರದಲ್ಲಿ ಒಂದು ಪಕ್ಷದವರು ಒಂದಷ್ಟು ಮಹಿಳೆಯರಿಗೆ ಬಾಗಿನ ಕೊಟ್ಟಿದ್ದಾರೆ. ಹೀಗಾಗಿ ನಾವೆಲ್ಲಾ ಅದೇ ಪಕ್ಷಕ್ಕೇ ಮತ ಹಾಕುತ್ತೇವೆ ಎಂದು ಹೇಳಿದರು. ಇಂದಿನ ಜನತಂತ್ರದಲ್ಲಿ ಪಕ್ಷಗಳು ಮಾಡುವ ಇಂತಹ ಸ್ಟಂಟ್‌ಗೆ ಮುಗ್ಧ ಜನರು ಎಷ್ಟು ಸುಲಭವಾಗಿ ಬಲಿಯಾಗುತ್ತಾರೆ! ಅದೇ ಮಹಿಳೆಯ ಪುತ್ರ ಕಳೆದ ಐದು ವರ್ಷಗಳಿಂದ ರಾಜ್ಯ ಸರಕಾರಿ ಇಲಾಖೆಯಲ್ಲಿ ಗುತ್ತಿಗೆ ನೌಕರ. ಪ್ರತಿಯೊಬ್ಬರ ಹಕ್ಕಾದ ಕೆಲಸದ ಭದ್ರತೆಯನ್ನು ತಮ್ಮ ಮಗನಿಂದ ಕಸಿದುಕೊಂಡಿರುವ ವ್ಯವಸ್ಥೆಯ ಕ್ರೌರ್ಯವನ್ನು ಗುರುತಿಸದೆ ಯಾರೋ ಪುಢಾರಿ ಕೊಡುವ ಬಾಗಿನಕ್ಕೆ ತೃಪ್ತಳು ಈ ತಾಯಿ!

ಅಷ್ಟಕ್ಕೂ ಪ್ರಸಕ್ತ ಕರ್ನಾಟಕ ಚುನಾವಣೆಯಲ್ಲಿ ಮಾಧ್ಯಮಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಒಂದು ವಿಷಯವನ್ನು ಗಮನಿಸೋಣ. ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋದರು ಎನ್ನುವ ವಿಷಯ ಮಾಧ್ಯಮಗಳಲ್ಲಿ ದಿನಗಟ್ಟಲೆ ಚರ್ಚೆಗೆ ಒಳಗಾಯಿತು. ಸುಮ್ಮನೆ ಯೋಚನೆ ಮಾಡೋಣ. ನಮ್ಮ ದೇಶದಲ್ಲಿ ಪ್ರತಿನಿತ್ಯ ಸಾವಿರಾರು ದೇವಸ್ಥಾನಗಳಿಗೆ ಲಕ್ಷಾಂತರ ಜನ ಭೇಟಿ ಕೊಡುತ್ತಾರೆ. ಇವರೆಲ್ಲಾ ಮಾಂಸ ತಿಂದು ಬಂದಿದ್ದಾರೋ ಇಲ್ಲವೋ ಎಂದು ಅವರ ಹೊಟ್ಟೆ ಬಗೆದು ನೋಡಲು ಸಾಧ್ಯವೇ? ಸಿದ್ದರಾಮಯ್ಯ ನೈಜ ಹಿಂದೂ ಅಲ್ಲ ಎಂದೆಲ್ಲಾ ಪ್ರಚಾರ ಮಾಡಲಾಯಿತು. ಆಡಳಿತ ಪಕ್ಷವನ್ನು ಪ್ರಶ್ನೆ ಮಾಡಲು ನೂರಾರು ಗಹನ ವಿಚಾರಗಳಿರುವಾಗ ಪಕ್ಷಪಾತಿ ಮಾಧ್ಯಮ ಆಯ್ಕೆ ಮಾಡಿಕೊಳ್ಳುವುದು ಜನರನ್ನು ಭಾವನಾತ್ಮಕವಾಗಿ ತಲುಪಬಲ್ಲ ಇಂತಹ ವಿಚಾರಗಳನ್ನು.

Writer - ವೆಂಕಟೇಶ್, ಬೆಂಗಳೂರು

contributor

Editor - ವೆಂಕಟೇಶ್, ಬೆಂಗಳೂರು

contributor

Similar News