ಮುಸ್ಲಿಂ ಅಸ್ಮಿತೆ ಮತ್ತು ಭಾರತೀಯತೆ

Update: 2018-05-13 19:12 GMT

ದೇಶ ವಿಭಜನೆಯನ್ನು ಯಾರು ಬಯಸಿದ್ದರು? ಬಯಸಿದವರು ಉತ್ತರ ಪ್ರದೇಶದ ಜಮೀನುದಾರರು ಮತ್ತು ಜಿನ್ನಾರಂಥ ಮುಸ್ಲಿಂ ರಾಜಕಾರಣಿಗಳು. ಹಿಂದೂ ಕೋಮುವಾದಿ ರಾಜಕಾರಣಿಗಳಿಗೂ ಇದೇ ಬೇಕಾಗಿತ್ತು. ಈಗ ಪಾಕಿಸ್ತಾನದಲ್ಲಿ ಮತ್ತು ಬಾಂಗ್ಲಾದೇಶ (ಹಿಂದಿನ ಪೂರ್ವ ಪಾಕಿಸ್ತಾನ)ಗಳಲ್ಲಿ ಇದ್ದ ಜನಸಾಮಾನ್ಯರಿಗೂ ಇದು ಬೇಕಾಗಿರಲಿಲ್ಲ.


ಭಾಗ-1

‘ಭಾರತದಲ್ಲಿ ಇಸ್ಲಾಂ ಧರ್ಮ ಖಡ್ಗ ಝಳಪಿಸುತ್ತ ಮತ್ತು ಬೆಂಕಿ ಹಚ್ಚುತ್ತ ಬಂದಿದೆ ಎಂದು ಹೇಳುವುದು ಹುಚ್ಚುತನದ ಪರಮಾವಧಿ. ಅದು ತುಳಿತಕ್ಕೊಳಗಾದ ಜನರ ವಿಮೋಚನೆಗಾಗಿ ಬಂದಿತು. ಅಂತೆಯೆ ಬ್ರಾಹ್ಮಣರು ಮತ್ತು ಜಮೀನುದಾರರಿಂದ ಬಿಡುಗಡೆಗೊಳ್ಳುವ ಉದ್ದೇಶದಿಂದ ನಮ್ಮ ಶೇ.20ರಷ್ಟು ಜನರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು’ ಎಂದು ಸ್ವಾಮಿ ವಿವೇಕಾನಂದ 19ನೇ ಶತಮಾನದಲ್ಲೇ ಹೇಳಿದ್ದಾರೆ.
 
 ದೇಶದಲ್ಲಿ ಸೂಫಿಗಳು ಭೇಟಿ ನೀಡದ ಹಳ್ಳಿಗಳಿಲ್ಲ. ಅವರ ಪ್ರಭಾವ ದೇಶದ ಮೂಲೆ ಮೂಲೆಗಳಲ್ಲಿದೆ. ಅವರು ಭಾರತ ದೇಶದ ತುಂಬ ಸಹಬಾಳ್ವೆ ಮತ್ತು ಪ್ರೇಮತತ್ತ್ವವನ್ನು ಹರಡಿದರು. ಅವರೆಂದೂ ತಾವು ಪವಾಡ ಪುರುಷರೆಂದು ಹೇಳಿಕೊಳ್ಳಲಿಲ್ಲ. ತಮ್ಮ ಮರಣದ ನಂತರ ತಮ್ಮ ಗೋರಿಗೆ ಬೇಡಿಕೊಳ್ಳಿರಿ ಎಂದು ಆದೇಶಿಸಲಿಲ್ಲ. ದರ್ಗಾಗಳು ಹಣ ಗಳಿಸುವ ಕೇಂದ್ರ ಮಾಡಬೇಕೆಂದು ಯೋಜನೆ ಹಾಕಲಿಲ್ಲ. ಅವರು ಪವಿತ್ರ ಮಾನವರಾಗಿದ್ದರು. ಎಲ್ಲ ಜಾತಿ ಧರ್ಮಗಳಲ್ಲಿನ ಭಾರತೀಯರ ಮನಸ್ಸನ್ನು ಗೆದ್ದಿದ್ದರು. ಮುಸ್ಲಿಮರು ಬೇರೆ ಜನಾಂಗಗಳ ಜೊತೆ ಹೇಗೆ ಬಾಳಬೇಕು, ಸ್ಥಳೀಯ ಭಾಷೆಯನ್ನು ಕಲಿಯುವುದರ ಮೂಲಕ ಅವರ ಜೊತೆ ಹೇಗೆ ವ್ಯವಹರಿಸಬೇಕು, ಅವರ ಹಬ್ಬ ಉತ್ಸವಗಳಲ್ಲಿ ಕೂಡ ಹೇಗೆ ಭಾಗವಹಿಸಬೆಕು, ತಮ್ಮ ಧರ್ಮವನ್ನು ಹೇಗೆ ಪಾಲಿಸಬೇಕು, ಬೇರೆಯವರ ಧರ್ಮಗಳನ್ನು ಹೇಗೆ ಗೌರವಿಸಬೆಕು ಎಂಬುದನ್ನು ಕಲಿಸಿದರು. ಆದರೆ ನಾವು ನಮ್ಮ ಮೂರ್ಖತನದಿಂದಾಗಿ ಅವರ ಮಹತ್ವವನ್ನು ಅರಿಯಲೇ ಇಲ್ಲ.
 
 ಪೈಗಂಬರರು ತಮ್ಮ ಹದೀಸ್‌ಗಳಲ್ಲಿ ಎರಡು ಕಡೆ ಭಾರತದೇಶವನ್ನು ಕೊಂಡಾಡಿದ್ದಾರೆ. ‘ನಾನು ಅರಬಸ್ತಾನದಲ್ಲಿ ಇದ್ದೇನೆ. ಆದರೆ ಅರಬಸ್ತಾನ್ ನನ್ನೊಳಗೆ ಇಲ್ಲ. ನಾನು ಹಿಂದ್ (ಭಾರತ) ದೇಶದಲ್ಲಿ ಇಲ್ಲ. ಆದರೆ ಹಿಂದ್ ನನ್ನೊಳಗೆ ಇದೆ’ ಎಂದು ಒಂದು ಕಡೆ ಹೇಳಿದರೆ ಇನ್ನೊಂದು ಕಡೆ ‘ಹಿಂದ್ ದೇಶದಿಂದ ನನ್ನೆಡೆಗೆ ತಂಪು ಗಾಳಿ (ಶಾಂತಿಯ ಸಂದೇಶ) ಬೀಸುತ್ತಿದೆ’ ಎಂದು ತಿಳಿಸಿದ್ದಾರೆ. ಪೈಗಂಬರರು ಅರಿತುಕೊಂಡ ಭಾರತದ ಪುನರ್ ನಿರ್ಮಾಣ ಮಾಡಬೇಕಿದೆ. ಶಾಂತಿ, ಅಹಿಂಸೆ, ಕ್ಷಮೆ ಮತ್ತು ಝಕಾತ್‌ನಂಥ ಆರ್ಥಿಕ ಚಿಂತನೆಗಳ ಮೂಲಕ ಸಾಮಾಜಿಕ ಜವಾಬ್ದಾರಿ ಮುಂತಾದ ಉತ್ಕೃಷ್ಟ ಚಿಂತನೆಗಳು ಇಸ್ಲಾಂ ಧರ್ಮದ ಮೌಲ್ಯಗಳಾಗಿವೆ ಎಂಬುದನ್ನು ಅನ್ಯಧರ್ಮೀಯರಿಗೆ ತಿಳಿ ಹೇಳುವಲ್ಲಿ ನಾವು ಸೋತಿದ್ದೇವೆ. ಅಷ್ಟೇ ಅಲ್ಲ ನಮ್ಮ ಧರ್ಮದ ಜನಸಮುದಾಯಕ್ಕೆ ಕೂಡ ತಿಳಿ ಹೇಳುವಲ್ಲಿ ಸೋತಿದ್ದೇವೆ. ದೇಶ ವಿಭಜನೆ:
 ದೇಶ ವಿಭಜನೆಯ ಕುರಿತು ಸಂಘಪರಿವಾರದವರು ಭಾರತೀಯ ಮುಸ್ಲಿಮರನ್ನು ಪದೇ ಪದೇ ಹೀಯಾಳಿಸುತ್ತಲೇ ಇರುತ್ತಾರೆ. ನೀವೇ ಬಯಸಿದ ದೇಶವಾದ ಪಾಕಿಸ್ತಾನಕ್ಕೆ ಹೋಗಿರಿ ಎಂದು ಹೇಳುವಷ್ಟರ ಮಟ್ಟಿಗೆ ನೀಚತನವನ್ನು ಪ್ರದರ್ಶಿಸುತ್ತಿದ್ದಾರೆ. ದೇಶ ವಿಭಜನೆಯನ್ನು ಯಾರು ಬಯಸಿದ್ದರು? ಬಯಸಿದವರು ಉತ್ತರ ಪ್ರದೇಶದ ಜಮೀನುದಾರರು ಮತ್ತು ಜಿನ್ನಾರಂಥ ಮುಸ್ಲಿಂ ರಾಜಕಾರಣಿಗಳು. ಹಿಂದೂ ಕೋಮುವಾದಿ ರಾಜಕಾರಣಿಗಳಿಗೂ ಇದೇ ಬೇಕಾಗಿತ್ತು. ಈಗ ಪಾಕಿಸ್ತಾನದಲ್ಲಿ ಮತ್ತು ಬಾಂಗ್ಲಾದೇಶ (ಹಿಂದಿನ ಪೂರ್ವ ಪಾಕಿಸ್ತಾನ)ಗಳಲ್ಲಿ ಇದ್ದ ಜನಸಾಮಾನ್ಯರಿಗೂ ಇದು ಬೇಕಾಗಿರಲಿಲ್ಲ. ಇವರಾರೂ ಪ್ರತ್ಯೇಕ ದೇಶ ಬೇಡಿರಲಿಲ್ಲ. ಆದರೂ ಸ್ವಾರ್ಥಕ್ಕಾಗಿ ದೇಶ ಇಬ್ಭಾಗವಾಯಿತು. ಆದರೆ ಅಧಿಕಾರ ದಾಹದ ಮುಸ್ಲಿಂ ರಾಜಕಾರಣಿಗಳು ಹಾಗೂ ಬಿಹಾರ ಮತ್ತು ಉತ್ತರ ಪ್ರದೇಶದ ಕಡೆಗಳಲ್ಲಿನ ಕೆಲ ಕಡುಬಡವ ಮುಸ್ಲಿಮರು ಮಾತ್ರ ಮಾತ್ರ ಪಾಕಿಸ್ತಾನಕ್ಕೆ ಹೋದರು. ಆದರೆ ಪಾಕಿಸ್ತಾನಕ್ಕಾಗಿ ಹೋರಾಡಿದ ಉತ್ತರ ಪ್ರದೇಶದ ಜಮೀನುದಾರರು ತಮ್ಮ ಸಾವಿರಾರು ಎಕರೆ ಜಮೀನು ಬಿಟ್ಟು ಪಾಕಿಸ್ತಾನಕ್ಕೆ ಹೋಗಲಿಲ್ಲ! ಇಬ್ಭಾಗವಾದ ನಂತರ ಎಷ್ಟೋ ವರ್ಷಗಳ ವರೆಗೆ ಪಾಕಿಸ್ತಾನ ಕಡೆಯ ಗಡಿಪ್ರದೇಶಗಳ ನಿರಕ್ಷರಿಗಳಿಗೆ ತಮ್ಮ ದೇಶ ಇಬ್ಭಾಗವಾಗಿದ್ದೂ ಗೊತ್ತಿರಲಿಲ್ಲ! ಈ ಸತ್ಯವನ್ನು ಸಂಘಪರಿವಾರದ ಕೋಮುವಾದಿಗಳಿಗೆ ಹೇಳುವಂಥ ಧೈರ್ಯವನ್ನು ಯಾವುದೇ ಮುಸ್ಲಿಂ ಧರ್ಮಗುರು, ಧರ್ಮಪಂಡಿತ ಅಥವಾ ಮುಸ್ಲಿಂ ಬುದ್ಧಿಜೀವಿಗಳು ತೀವ್ರವಾಗಿ ಮಾಡಲಿಲ್ಲ.
 
 ಕಾಶ್ಮೀರ ಪ್ರಶ್ನೆ: ಕಾಶ್ಮೀರದ ಮಹಾರಾಜ ಹರಿಸಿಂಗ್ ಸ್ವತಂತ್ರವಾದ ಕಾಶ್ಮೀರವನ್ನು ಸ್ವತಂತ್ರ ದೇಶವಾಗಿ ಉಳಿಸಿಕೊಳ್ಳಲು ಪ್ರಯತ್ನಿಸಿದರು. ಸಣ್ಣ ದೇಶವಾದ ಪಾಕಿಸ್ತಾನದ ಜೊತೆ ಸಂಬಂಧ ಇಟ್ಟುಕೊಳ್ಳುವ ಯೋಜನೆ ಅವರದಾಗಿತ್ತು. ದೇಶ ವಿಭಜನೆಯಾದ ಕೆಲವೇ ತಿಂಗಳುಗಳಲ್ಲಿ ಪಾಕಿಸ್ತಾನ ಕಾಶ್ಮೀರದ ಮೇಲೆ ಆಕ್ರಮಣ ಮಾಡಿತು. ಆಗ ಕಾಶ್ಮೀರ ಭಾರತದ ಭಾಗವಾಗದೆ ಇರುವುದರಿಂದ ಭಾರತದ ಸೈನ್ಯ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಹಾಗಿರಲಿಲ್ಲ. ಕಾಶ್ಮೀರದ ಮುಸ್ಲಿಂ ಯುವಕರು ಜನತಾ ಸೈನ್ಯ ಕಟ್ಟಿಕೊಂಡು ಪಾಕಿಸ್ತಾನಿ ಸೈನಿಕರನ್ನು ಎದುರಿಸಿದರು. ಕೊನೆಗೆ ಷರತ್ತುಗಳೊಂದಿಗೆ ಕಾಶ್ಮೀರ ಭಾರತದ ಭಾಗವಾಗುವುದರೊಳಗಾಗಿ ಪಾಕ್ ಆಕ್ರಮಿತ ಅರ್ಧ ಕಾಶ್ಮೀರ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದಾಗಿ ಪಾಕಿಸ್ತಾನದ ಭಾಗವಾಗಿ ಉಳಿದು ಸಮಸ್ಯೆ ಸೃಷ್ಟಿಯಾಯಿತು.
 ಮಹಾರಾಜಾ ಹರಿಸಿಂಗ್ ಭಾರತದಿಂದ ದೂರ ಉಳಿಯಲು ಯತ್ನಿಸಿದ್ದಕ್ಕಾಗಿಯೆ ಈ ಸಮಸ್ಯೆ ಇಂದು ಹಿಮಾಲಯದ ಗಾತ್ರದಷ್ಟು ಬೆಳೆದಿದೆ. ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಮರು ಎಲ್ಲ ರೀತಿಯ ಅತಂತ್ರ ಬದುಕನ್ನು ಅನುಭವಿಸುತ್ತಿದ್ದಾರೆ.
 
 ಸ್ವಾತಂತ್ರ ಹೋರಾಟ: ಸ್ವಾತಂತ್ರ ಹೋರಾಟದಲ್ಲಿ ಸಹಸ್ರಾರು ಮುಸ್ಲಿಮರು, ಹಿಂದೂಗಳು ಆಸ್ತಿಪಾಸ್ತಿ ಮತ್ತು ಜೀವ ಕಳೆದುಕೊಂಡಿದ್ದಾರೆ. ಶಿಕ್ಷೆ ಅನುಭವಿಸಿದ್ದಾರೆ. ಆದರೆ 1925ರಲ್ಲಿ ಹುಟ್ಟಿದ ಸಂಘಪರಿವಾರದ ಒಬ್ಬನೂ ಹುತಾತ್ಮನಾದ ದಾಖಲೆ ಇಲ್ಲ! 1942ರ ಚಲೇಜಾವ್ ಚಳವಳಿಯಲ್ಲಿ ಯುವಕ ಅಟಲ್ ಬಿಹಾರಿ ವಾಜಪೇಯಿ ಆಗ್ರಾ ಬಳಿಯ ಬಟೇಶ್ವರ ಗ್ರಾಮದಲ್ಲಿ ಇಬ್ಬರು ಸ್ವಾತಂತ್ರ ಹೋರಾಟಗಾರರ ಬಂಧನವಾಗಲಿಕ್ಕೆ ಕಾರಣವಾಗಿದ್ದರ ದಾಖಲೆ ಕೇಂದ್ರ ಪತ್ರಾಗಾರದಲ್ಲಿದೆ. ಅದನ್ನು ಹೊರಗೆ ಹಾಕಿದವರು ಈಗ ಭಾರತೀಯ ಜನತಾ ಪಕ್ಷದಲ್ಲಿರುವ ಸುಬ್ರಮಣಿಯನ್ ಸ್ವಾಮಿ!
 ಭಾರತದ ಸ್ವಾತಂತ್ರಕ್ಕಾಗಿ ಹುತಾತ್ಮರಾದ ಮುಸ್ಲಿಮರ ಕುರಿತು ಪಶ್ಚಿಮ ಬಂಗಾಲದ ಇತಿಹಾಸಕಾರ ಶಾಂತಿಮಯ ರಾಯ್ ಬರೆದಾಗ ಅನೇಕರ ಕಣ್ಣುಗಳು ತೆರೆದವು. ಇಂಥ ಯಾವ ಕಾರ್ಯವನ್ನೂ ಇಸ್ಲಾಂನ ಧರ್ಮಪಂಡಿತರು ಮಾಡಲಿಲ್ಲ.
 
 
 ಎಲ್ಲ ಜನಾಂಗಗಳ ಕೋಟ್ಯಂತರ ಜನರ ಸಹಸ್ರಾರು ವರ್ಷಗಳ ನಿರಂತರ ಶ್ರಮದಿಂದ ಭಾರತ ದೇಶದ ನಾಗರಿಕತೆ ಮತ್ತು ಬಹುತ್ವ ಸಂಸ್ಕೃತಿ ರೂಪುಗೊಂಡಿದೆ. ರೈತರು, ಕಾರ್ಮಿಕರು ಮೊದಲು ಮಾಡಿ ಎಲ್ಲ ಜಾತಿ, ಧರ್ಮ ಮತ್ತು ವರ್ಗಗಳ ಜನರ ಕೊಡುಕೊಳ್ಳುವಿಕೆಯ ಮೂಲಕ ಈ ದೇಶ ಮುನ್ನಡೆದಿದೆ. ದೇಶದಲ್ಲಿ ಸ್ವಾತಂತ್ರ್ಯಾನಂತರ ಕೂಡ ಹತ್ತಾರು ಸಹಸ್ರ ಕೋಮುಗಲಭೆಗಳು ಮತ್ತು ಉಗ್ರಗಾಮಿಗಳ ದುಷ್ಕೃತ್ಯಗಳು ನಡೆದು ಸಹಸ್ರಾರು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಅನೇಕ ಕುಟುಂಬಗಳು ಅನಾಥವಾಗಿವೆ. ದೇಶದ ಜನ ಈ ಎಲ್ಲ ನೋವು ಮತ್ತು ಅಸಹಾಯಕತೆಗಳ ಮಧ್ಯೆ ಕೂಡ ಒಗ್ಗಟ್ಟನ್ನು ಕಾಪಾಡಿಕೊಂಡು ಪ್ರಜಾಪ್ರಭುತ್ವದ ರಕ್ಷಣೆ ಮಾಡುತ್ತಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಅವರಂಥ ಮಹಾಪುರುಷರು, ಅನುಭಾವಿಗಳು ಹಾಗೂ ಸೂಫಿ, ಶರಣ, ಸಂತ, ದಾಸ ಮತ್ತು ಅವಧೂತ ಮುಂತಾದ ಅನುಭಾವಿ ಹಾಗೂ ಭಕ್ತಿಪಂಥಗಳು ಸಹಸ್ರಾರು ವರ್ಷಗಳಿಂದ ಈ ದೇಶದ ಜನಸಮುದಾಯಗಳ ನೈತಿಕ ಶಕ್ತಿಯನ್ನು ಕಾಪಾಡಿಕೊಂಡು ಬಂದಿವೆ. ಜಾತಿ, ಅಸ್ಪಶ್ಯತೆ ಮತ್ತು ವರ್ಣ ವ್ಯವಸ್ಥೆಯ ಅಸಹ್ಯ ಸ್ಥಿತಿಯಲ್ಲಿ ಕೂಡ ಸಹನೆಯ ವಾತಾವರಣ ಸೃಷ್ಟಿಸಿವೆ.
 ದೇಶದ ಸ್ವಾತಂತ್ರಕ್ಕಾಗಿ ಎಲ್ಲ ಜನಾಂಗಗಳು ಹೋರಾಡಿವೆ. ಎಲ್ಲ ಜನಾಂಗಗಳಲ್ಲೂ ಹುತಾತ್ಮರಾಗಿದ್ದಾರೆ. ಭಾರತ ದೇಶ ಸಹಜವಾಗಿಯೆ ಇಲ್ಲಿ ಬದುಕುವ ಎಲ್ಲ ನಾಗರಿಕರ ಸೊತ್ತಾಗಿದೆ. ಆದರೆ ಯಥಾಸ್ಥಿತಿವಾದಿಗಳ ಕೈಗೊಂಬೆಗಳಾಗಿರುವ ಕೋಮುವಾದಿ ಮತ್ತು ಉಗ್ರಗಾಮಿ ಶಕ್ತಿಗಳು ದೇಶದ ಬಹುತ್ವ ಸಂಸ್ಕೃತಿಗೆ ಧಕ್ಕೆಯನ್ನುಂಟು ಮಾಡುತ್ತ ಭಾವೈಕ್ಯವನ್ನು ಹಾಳು ಮಾಡುವುದರಲ್ಲಿ ತಲ್ಲೀನವಾಗಿವೆ. ಈ ದುಷ್ಟಶಕ್ತಿಗಳಿಂದಾಗಿ ದೇಶದ ಜನರಲ್ಲಿ ಆತಂಕ ಮೂಡುತ್ತಿದೆ.
 
ದೇಶದ ಬಹುತ್ವ ಸಂಸ್ಕೃತಿಯನ್ನು ದ್ವೇಷ ಸಂಸ್ಕೃತಿ ಹಾಳು ಮಾಡುತ್ತಿವೆ. ಕೋಮುವಾದಿ ಶಕ್ತಿಗಳು ಧರ್ಮಗಳ ಹೆಸರಿನಲ್ಲಿ ಭಾರತೀಯ ಸಮಾಜವನ್ನು ಒಡೆಯುವ ಮೂಲಕ ಸಂಪೂರ್ಣವಾಗಿ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿವೆ. ದೇಶದ ಸರ್ವತೋಮುಖ ಅಭಿವೃದ್ಧಿಯ ಬದಲಿಗೆ ಕೆಲವೇ ಕೆಲವು ಬಂಡವಾಳಶಾಹಿಗಳು ಸಾವಿರಾರು ಕೋಟಿ ರೂಪಾಯಿ ಲಾಭ ಪಡೆಯುವಂಥ ಸ್ಥಿತಿಯನ್ನು ಕೋಮುವಾದಿ ಪ್ರಭುತ್ವ ನಿರ್ಮಾಣ ಮಾಡಿದೆ. ಒಂದು ಅಂದಾಜಿನ ಪ್ರಕಾರ ಈಗಾಗಲೇ ಬಂಡವಾಳಶಾಹಿಗಳು 6 ಲಕ್ಷ ಕೋಟಿ ರೂಪಾಯಿಗಳಷ್ಟು ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಿಲ್ಲ. ಮಾಡುವುದೂ ಇಲ್ಲ. ಏಕೆಂದರೆ ಕೇಂದ್ರ ಸರಕಾರವೇ ಅವರ ಪರವಾಗಿ ನಿಂತಿದೆ. ಆದರೆ ಕೇವಲ ಐವತ್ತು ಸಾವಿರ ರೂ.ನಷ್ಟು ಸಾಲ ಮಾಡಿದ ರೈತರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡ ಕಾರಣ ಅವರ ಕುಟುಂಬಗಳು ಬೀದಿಪಾಲಾಗಿವೆ. ಭಾರತದಲ್ಲಿ ಅಭಿವೃದ್ಧಿ ಎಂದರೆ ಬಂಡವಾಳಶಾಹಿಗಳನ್ನು ಸಾಮ್ರಾಜ್ಯಶಾಹಿಗಳ ಜೊತೆಗಾರರನ್ನಾಗಿ ಮಾಡಿ, ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದು. ಈ ಫಲಾನುಭವಿಗಳೆಲ್ಲ ಸೇರಿ ಚುನಾವಣೆಯಲ್ಲಿ ಎಲ್ಲರೀತಿಯ ವ್ಯವಸ್ಥೆ ಮಾಡುವಂತೆ ನೋಡಿಕೊಳ್ಳುವುದು ಇಂದಿನ ಚಾಣಾಕ್ಷ ರಾಜಕಾರಣವಾಗಿದೆ.
 ಧರ್ಮವಾದಿಗಳು ಮತ್ತು ಧರ್ಮವಂತರು:

ಇಂದಿನ ರಾಜಶಕ್ತಿ ಎಲ್ಲ ಕ್ಷೇತ್ರಗಳ ಶಕ್ತಿಗಳನ್ನು ತನ್ನ ಕೈವಶ ಮಾಡಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಎಲ್ಲ ಅಂಗಗಳನ್ನು ತನ್ನ ಅಧೀನದಲ್ಲಿರುವಂತೆ ನೋಡಿಕೊಳ್ಳುತ್ತಿದೆ. ಯುವಕರಿಗೆ ಸುಳ್ಳು ಭರವಸೆಗಳನ್ನು ಕೊಡುತ್ತಿದೆ. ಜನರು ಸಹಜವಾಗಿಯೆ ಧರ್ಮವಂತರಾಗಿದ್ದಾರೆ. ಆದರೆ ಅವರನ್ನು ಧರ್ಮವಾದಿಗಳನ್ನಾಗಿಸುವಲ್ಲಿ ತಲ್ಲೀನವಾಗಿದೆ. ಬಂಡವಾಳವಾದ ಮತ್ತು ಕೋಮುವಾದ ಒಂದಕ್ಕೊಂದು ಪೂರಕವಾಗಿ ಕಾರ್ಯನಿರತವಾಗಿದ್ದು ಜನರು ಬಡತನವನ್ನು ಮತ್ತು ಕೋಮುವಾದವನ್ನು ಏಕಕಾಲಕ್ಕೆ ಎದುರಿಸುವ ವಾತಾವರಣ ಸೃಷ್ಟಿಯಾಗಿದೆ. ಧರ್ಮಗಳ ಹೆಸರಿನಲ್ಲಿ ಸಮಾಜವಿರೋಧಿ ಶಕ್ತಿಗಳು ದೈನಂದಿನ ಬದುಕನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಯತ್ನಿಸುತ್ತಿವೆ. ಇಂಥ ವಿಷಮ ಪರಿಸ್ಥಿತಿ ಸರ್ವಾಧಿಕಾರಿ ವ್ಯವಸ್ಥೆಯನ್ನು ತರಲು ಪೂರಕವಾಗಿದೆ, ಹಿಟ್ಲರ್ ಕೂಡ ಆಶ್ವರ್ಯಪಡುವಂಥ ವಿದ್ಯಮಾನಗಳು ದೇಶದಲ್ಲಿ ಜರುಗುತ್ತಿವೆ. ಇದಕ್ಕೆ ವಿರುದ್ಧವಾಗಿ ಜನರನ್ನು ಜಾತ್ಯತೀತ ನೆಲೆಯಲ್ಲಿ ಸಂಘಟಿಸಿ, ದೇಶದಲ್ಲಿ ಹಿಟ್ಲರ್‌ಶಾಹಿ ಆಡಳಿತ ಬೆಳೆಯದಂತೆ ನೋಡಿಕೊಳ್ಳುವ ಕಾಲ ಬಂದೊದಗಿದೆ. ಈ ದೇಶದಲ್ಲಿ ಜನಿಸಿದ ಮತ್ತು ಈ ದೇಶದ ನಾಗರಿಕತ್ವ ಪಡೆದ ಪ್ರತಿಯೊ ಬ್ಬರಿಗೂ ಸಮಾನ ಹಕ್ಕಿದೆ ಎಂದು ನಮ್ಮ ಸಂವಿಧಾನ ಹೇಳುತ್ತದೆ. ಯಾವುದೇ ಒಂದು ಧರ್ಮದ ಜನರಿಗೆ ಈ ದೇಶ ಸೇರಿದ್ದಲ್ಲ ಎಂದು ಎಚ್ಚರಿಸುತ್ತದೆ.

(ಮುಂದುವರಿಯುವುದು..)

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News