ಡಾಲರ್‌ನೆದುರು 15 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

Update: 2018-05-14 15:24 GMT

ಹೊಸದಿಲ್ಲಿ,ಮೇ 14: ಭಾರತೀಯ ರೂಪಾಯಿಯು ಸೋಮವಾರ ಅಮೆರಿಕದ ಡಾಲರ್‌ನೆದುರು ಕಳೆದ 15 ತಿಂಗಳಲ್ಲಿ ಕನಿಷ್ಠ ಮಟ್ಟವಾದ 67.51ಕ್ಕೆ ಕುಸಿದಿದೆ. ಶುಕ್ರವಾರ ಅದು 67.33ಕ್ಕೆ ಮುಕ್ತಾಯಗೊಂಡಿತ್ತು.

ಸೋಮವಾರ ಭಾರತೀಯ ಶೇರುಪೇಟೆಗಳು ಸಹ ಒತ್ತಡದಲ್ಲಿದ್ದು,ಶೇರು ವ್ಯಾಪಾರಿಗಳು ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಮೇಲೆ ನಿಕಟ ನಿಗಾಯಿರಿಸಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಸೋಮವಾರ ರೂಪಾಯಿಯು ಡಾಲರ್‌ನೆದುರು 67.51 ಮತ್ತು 67.21ರ ನಡುವೆ ವಹಿವಾಟು ನಡೆಸಿದೆ. ಮಾರುಕಟ್ಟೆಯು ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಗಮನವಿಟ್ಟು ಕಾಯುತ್ತಿದೆ ಎಂದು ಹೇಳಿರುವ ವಿದೇಶಿ ವಿನಿಮಯ ಸಲಹಾ ಸಂಸ್ಥೆ ಐಎಫ್‌ಎ ಗ್ಲೋಬಲ್,ಮಂಗಳವಾರ ಕರ್ನಾಟಕ ಚುನಾವಣಾ ಫಲಿತಾಂಶಗಳು ಹೊರಬಿದ್ದ ಬಳಿಕ ರೂಪಾಯಿಯ ಚಲನೆಯು ದೇಶಿಯ ಮಾರುಕಟ್ಟೆಗಳು ಮತ್ತು ಡಾಲರ್ ನಿರ್ವಹಣೆಯನ್ನು ಅನುಸರಿಸಲಿದೆ ಎಂದು ತಿಳಿಸಿದೆ. ಚುನಾವಣೋತ್ತರ ಸಮೀಕ್ಷೆಗಳು ಕರ್ನಾಟಕದಲ್ಲಿ ತ್ರಿಶಂಕು ವಿಧಾನಸಭೆ ರೂಪುಗೊಳ್ಳುವ ಸಾಧ್ಯತೆಯನ್ನು ಬಿಂಬಿಸಿವೆ.

 ಶೇರು ವಹಿವಾಟುದಾರರು ಕರ್ನಾಟಕ ಚುನಾವಣಾ ಫಲಿತಾಂಶಕ್ಕೆ ಪ್ರತಿಕ್ರಿಯಿಸಲಿದ್ದಾರೆ ಎಂದು ಹೇಳಿದ ಕೋಟಕ್ ಸೆಕ್ಯೂರಿಟಿಸ್‌ನ ಅನಿಂದ್ಯ ಬ್ಯಾನರ್ಜಿ ಅವರು,ಆದರೆ ರೂಪಾಯಿಯು ತನ್ನ ಮೌಲ್ಯ ವರ್ಧಿಸಿಕೊಳ್ಳಲು ತೈಲಬೆಲೆಗಳು ತಗ್ಗುವ ಅಗತ್ಯವಿದೆ ಎಂದರು. ಹೆಚ್ಚುತ್ತಿರುವ ತೈಲಬೆಲೆಗಳ ಕುರಿತು ಕಳವಳಗಳ ನಡುವೆಯೇ ಈ ವರ್ಷದ ಆರಂಭದಿಂದ ರೂಪಾಯಿಯು ಡಾಲರ್‌ನೆದುರು ಶೇ.5ಕ್ಕೂ ಅಧಿಕ ಕುಸಿತವನ್ನು ದಾಖಲಿಸಿದೆ.

ಸೋಮವಾರ ಇತರ ಕರೆನ್ಸಿಗಳ ಎದುರು ಡಾಲರ್ ಕುಸಿದಿದ್ದರೂ,ಡಾಲರ್‌ನೆದುರು ರೂಪಾಯಿ ಇಳಿಕೆಯನ್ನು ಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News