×
Ad

ಪರಮಾಣು ಒಪ್ಪಂದ ಬಿಕ್ಕಟ್ಟು: ಇರಾನ್ ವಿದೇಶ ಸಚಿವ ರಶ್ಯ ಭೇಟಿ

Update: 2018-05-14 21:05 IST

ಮಾಸ್ಕೊ, ಮೇ 14: ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ, ಒಪ್ಪಂದವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ರಶ್ಯಕ್ಕೆ ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಸೋಮವಾರ ಭೇಟಿ ನೀಡಿದ್ದಾರೆ. ಇರಾನ್ ವಿದೇಶ ಸಚಿವರು ಇದೇ ವಿಷಯಕ್ಕೆ ಸಂಬಂಧಿಸಿ ವಾರಾಂತ್ಯದಲ್ಲಿ ಚೀನಾಕ್ಕೆ ಭೇಟಿ ನೀಡಿದ್ದಾರೆ ಹಾಗೂ ಈ ವಾರದಲ್ಲಿ ಬ್ರಸೆಲ್ಸ್‌ಗೆ ಭೇಟಿ ನೀಡಲಿದ್ದಾರೆ.

ರವಿವಾರ ಚೀನಾ ವಿದೇಶ ಸಚಿವರನ್ನು ಭೇಟಿಯಾದ ಬಳಿಕ ಮಾತನಾಡಿದ ಶರೀಫ್, ಒಪ್ಪಂದಕ್ಕೆ ಭವಿಷ್ಯದಲ್ಲಿ ಸ್ಪಷ್ಟ ವಿನ್ಯಾಸವೊಂದು ಲಭಿಸುವ ಬಗ್ಗೆ ಭರವಸೆ ಇದೆ ಎಂದರು.

ಒಪ್ಪಂದದಿಂದ ಹಿಂದೆ ಸರಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರದ ಬಗ್ಗೆ ‘ತೀವ್ರ ಆತಂಕ’ ವ್ಯಕ್ತಪಡಿಸಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಈಗಾಗಲೇ ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಮತ್ತು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಜೊತೆ ಮಾತುಕತೆ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.

ಒಪ್ಪಂದದಿಂದ ಹಿಂದೆ ಸರಿಯುವ ಟ್ರಂಪ್‌ರ ನಿರ್ಧಾರದಿಂದ ಯುರೋಪ್‌ನಲ್ಲಿರುವ ಅಮೆರಿಕ ಮಿತ್ರ ದೇಶಗಳು ಹಾಗೂ ರಶ್ಯ ಮತ್ತು ಚೀನಾ ಕೋಪಗೊಂಡಿವೆ.

‘‘ಬ್ರಿಟನ್‌ನಲ್ಲಿ ರಶ್ಯದ ಮಾಜಿ ಗೂಢಚಾರನ ಮೇಲೆ ವಿಷಪ್ರಾಶನ ನಡೆದ ಘಟನೆಯ ಬಳಿಕ, ಐರೋಪ್ಯ ದೇಶಗಳು ಮತ್ತು ರಶ್ಯದ ನಡುವಿನ ಸಹಕಾರ ಅಸಂಭವವೆಂಬಂತೆ ಕಂಡಿತ್ತು. ಅದರ ಪರಿಣಾಮವಾಗಿ ರಾಜತಾಂತ್ರಿಕರ ವಾಪಸಾತಿ ನಡೆದಿತ್ತು. ಈಗ ಅವುಗಳ ನಡುವೆ ಸಹಕಾರ ಸಾಧ್ಯ ಎಂಬಂತೆ ಕಂಡುಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News