ಹವಾಯಿ ಜ್ವಾಲಾಮುಖಿ ಇನ್ನೊಮ್ಮೆ ಸ್ಫೋಟ
ಪಹೋ (ಹವಾಯಿ), ಮೇ 14: ಅಮೆರಿಕದ ಹವಾಯಿ ರಾಜ್ಯದ ಕಿಲೋಯ ಜ್ವಾಲಾಮುಖಿಯಲ್ಲಿ ರವಿವಾರ ಹೊಸ ಬೃಹತ್ ರಂಧ್ರವೊಂದು ಸೃಷ್ಟಿಯಾಗಿದ್ದು, ಇದರಿಂದ ದ್ರವ ರೂಪದ ಬಂಡೆ ಲಾವಾರಸದ ರೂಪದಲ್ಲಿ ಹೊರಗೆ ಚಿಮ್ಮುತ್ತಿದೆ.ಹೊಸ ಜ್ವಾಲಾಮುಖಿ ಸ್ಫೋಟದಿಂದಾಗಿ ಸಮೀಪದ ಮನೆಗಳಿಗೆ ಬೆದರಿಕೆಯುಂಟಾಗಿದ್ದು, ಜನರನ್ನು ತೆರವುಗೊಳಿಸಲು ಅಧಿಕಾರಿಗಳು ಆದೇಶ ನೀಡಿದ್ದಾರೆ.
ಈ ರಂಧ್ರವು ಜ್ವಲಾಮುಖಿಯು ಮೇ 3ರಂದು ಲಾವಾ ಉಗುಳಲು ಆರಂಭಿಸಿದಂದಿನಿಂದ 17ನೇ ರಂಧ್ರವಾಗಿದೆ. ಕಳೆದ 10 ದಿನಗಳ ಅವಧಿಯಲ್ಲಿ ಜ್ವಾಲಾಮುಖಿಯು 37 ಕಟ್ಟಡಗಳನ್ನು ಸುಟ್ಟುಹಾಕಿದೆ ಹಾಗೂ ಸುಮಾರು 2,000 ಮಂದಿ ಮನೆಗಳನ್ನು ತೊರೆದಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಕಂಡುಬಂದಂತೆ, ಈ ಬಿರುಕು 300 ಮೀಟರ್ ಉದ್ದವಿದೆ. ಇದು 1,200 ಮೀಟರ್ ಎತ್ತರದ ಜ್ವಾಲಾಮುಖಿ ಪರ್ವತ ಕಿಲೋಯದ ಪಕ್ಕದಲ್ಲಿದೆ.
‘‘ಇಲ್ಲಿ ನಿರಂತರ ಲಾವಾ ಹೊರಚಿಮ್ಮುವ ಸದ್ದು ಹಾಗೂ ಆಗಾಗ ಕಿವಿಗಡಚಿಕ್ಕುವ ಸ್ಫೋಟಗಳು ಕೇಳುತ್ತಿವೆ’’ ಎಂದು ಸಮೀಪದ ನಿವಾಸಿಯೊಬ್ಬರು ಹೇಳಿದರು. ಗಂಧಕದ ಡೈ ಆಕ್ಸೈಡ್ ಹೊರಸೂಸುವಿಕೆ ದಟ್ಟವಾಗಿರುವ ಪ್ರದೇಶಗಳಲ್ಲಿನ ಗಿಡಗಳು ಕಂದು ಬಣ್ಣಕ್ಕೆ ತಿರುಗಿವೆ ಹಾಗೂ ಎಲೆಗಳಿರದ ಮರಗಳು ಒಣಗಿವೆ.