ನವಾಝ್ ಶರೀಫ್ ಹೇಳಿಕೆಗೆ ಮಾಧ್ಯಮಗಳ ಟೀಕೆ
ಇಸ್ಲಾಮಾಬಾದ್, ಮೇ 14: ಮುಂಬೈ ದಾಳಿಯಲ್ಲಿ ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕರು ಶಾಮೀಲಾಗಿದ್ದಾರೆ ಎಂಬ ಹೇಳಿಕೆ ನೀಡಿರುವುದಕ್ಕಾಗಿ ಪಾಕಿಸ್ತಾನಿ ಮಾಧ್ಯಮಗಳು ಮಾಜಿ ಪ್ರಧಾನಿ ನವಾಝ್ ಶರೀಫ್‌ರನ್ನು ಕಟುವಾಗಿ ಟೀಕಿಸಿವೆ.
26/11 ದಾಳಿ ಆರೋಪಿಗಳ ವಿರುದ್ಧ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮೊಕದ್ದಮೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಿಸಲಾಗುತ್ತಿದೆ ಎಂಬುದಾಗಿ ‘ಡಾನ್’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದರು.
‘‘ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಅವರನ್ನು ದೇಶವಿಲ್ಲದ ವ್ಯಕ್ತಿಗಳು ಎಂಬುದಾಗಿ ಬಿಂಬಿಸಿ, ಅವರಿಗೆ ಗಡಿ ದಾಟಲು ಹಾಗೂ ಮುಂಬೈಯಲ್ಲಿ 150 ಮಂದಿಯನ್ನು ಕೊಲ್ಲಲು ಅವಕಾಶ ನೀಡಬೇಕೇ? ನನಗೆ ವಿವರಿಸಿ’’ ಎಂದು ಶರೀಫ್ ಹೇಳಿದ್ದರು.
ಶರೀಫ್ ದೇಶದ ಹಿತಾಸಕ್ತಿಯ ವಿರುದ್ಧ ಮಾತನಾಡುತ್ತಿದ್ದಾರೆ ಎಂಬುದಾಗಿ ರವಿವಾರ ಹೆಚ್ಚಿನ ಟಿವಿ ಚಾನೆಲ್‌ಗಳು ಹೇಳಿವೆ.
ಭಾರತದಲ್ಲಿ ಅಗ್ಗದ ಪ್ರಚಾರ ಗಿಟ್ಟಿಸುವುದಕ್ಕಾಗಿ ಶರೀಫ್ ಈ ರೀತಿ ಮಾಡುತ್ತಿದ್ದಾರೆ ಎಂಬುದಾಗಿ ಪತ್ರಿಕೆಗಳು ಆರೋಪಿಸಿವೆ.