ಇವರು ಈ ಚುನಾವಣೆಗೊಂದು ಘನತೆ

Update: 2018-05-14 18:30 GMT

ಮಾನ್ಯರೇ,

ಗುಜರಾತಿನ ಗಲಭೆಯಿಂದ ಇಲ್ಲಿಯವರೆಗೆ ನಾನು ಭಾರತದ ಚುನಾವಣೆಗಳನ್ನು ಗಮನಿಸುತ್ತಲೇ ಬಂದಿದ್ದೇನೆ. ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಕೋಮುವಾದಿಗಳಿಗೆ ಬರೀ ಕೋಮುವಾದಿ ಅಜೆಂಡಾಗಳನ್ನಿಟ್ಟುಕೊಂಡು, ಧರ್ಮವನ್ನು ಮುಂದೆ ಮಾಡಿಕೊಂಡು, ಬರೀ ಹಲ್ಲೆ, ಜನಾಂಗೀಯ ದ್ವೇಷ, ದೇಶ ಭಕ್ತಿ ರಾಷ್ಟ್ರಪ್ರೇಮಗಳ ಹೆಸರಿನಲ್ಲಿ ನರೇಂದ್ರ ಮೋದಿ ಮತ್ತವರ ಪಾಳೆಯದಲ್ಲಿ ವಿಷ ಬೀಜ ಬಿತ್ತುತ್ತಿರುವುದನ್ನೇ ನೋಡಿದ ನನಗೆ ಇಂದು ಕರ್ನಾಟಕ ಬಹಳಷ್ಟು ಸುರಕ್ಷಿತ ನಗರವಾಗಿ ಕಾಣುತ್ತಿರುವುದಕ್ಕೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಘನವೆತ್ತ ನಡವಳಿಕೆಗಳೇ ಕಾರಣವಾಗಿವೆ.

ವಯಸ್ಸಿನಲ್ಲಿ ಮೋದಿಯವರಿಗಿಂತ ತುಂಬಾ ಚಿಕ್ಕವರಾದ ರಾಹುಲ್ ಗಾಂಧಿಯವರೂ ಸಹ ಕರ್ನಾಟಕದ ಅಭಿವೃಧ್ಧಿ ಮಾದರಿಯವನ್ನು ಮುಂದಿಟ್ಟುಕೊಂಡು ಮಾತನಾಡಿದರು. ಹಲವಾರು ವರ್ಷಗಳಿಂದ ಕೇವಲ ಹಲ್ಲೆಕೊರ ಚುನಾವಣಾ ಭಾಷಣಗಳನ್ನು ಕೇಳುತ್ತಿದ್ದ ನಮಗೆ ಈ ವರ್ಷ, ರಾಹುಲ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಒಟ್ಟಾರೆ ಕಾಂಗ್ರೆಸ್ ಪಕ್ಷ ಸೇರಿ ಕರ್ನಾಟಕದರು ಉತ್ತಮ ಸಂಸ್ಕೃತಿಯನ್ನು, ಘನವೆತ್ತ ನಡೆಯನ್ನು ಈ ಚುನಾವಣೆಯಲ್ಲಿ ಪ್ರದರ್ಶಿಸಿದ್ದಾರೆ. ಇಡೀ ಭಾರತ ಕರ್ನಾಟಕದ ಕಡೆ ಮುಖ ಮಾಡಿ ನೋಡುತ್ತಿದೆ. ಅದರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದು ನಮಗೆ ಅತ್ಯಂತ ಹೆಮ್ಮೆಯ ವಿಷಯ.

ನಾನು ಗಮನಿಸಿದ ಮತ್ತೊಂದು ವಿಷಯವೆಂದರೆ, ಹಿಂದೆ ಕಾಂಗ್ರೆಸ್‌ಗೆ ವಾಚಾಮಗೋಚರ ಬಯ್ಯುತ್ತಿದ್ದ ಎಡಪಂಥೀಯರಿಗೆ ಕಾಂಗ್ರೆಸ್ ಅನಿವಾರ್ಯವಾಗಿದೆ. ಪ್ರಾಂಜಲ ಮನಸ್ಸಿನಿಂದ ಅವರೂ ಕಾಂಗ್ರೆಸ್‌ಗೆ ಬೆಂಬಲಿಸುತ್ತಿದ್ಧಾರೆ. ಸಿಪಿಐ, ಸಿಪಿಎಂ, ಅಲ್ಲದೇ ಪ್ರಕಾಶ್ ರೈ, ಜಿಗ್ನೇಶ್ ಮೇವಾನಿ, ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ, ವಿಜಯಮ್ಮ, ಶೆಹ್ಲಾ ರಶೀದ್, ಕನ್ಹಯ್ಯಾ ಕುಮಾರ್, ಜಿ.ಕೆ.ಗೋವಿಂದರಾವ್, ಹಲವಾರು ಸಾಹಿತಿಗಳು, ಬುದ್ಧಿಜೀವಿಗಳು ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದ್ದು ಮತ್ತೊಂದು ಈ ಚುನಾವಣೆಯ ವಿಶೇಷತೆಯಾಗಿದೆ. ಅದರಲ್ಲೂ ಕರ್ನಾಟಕ ಶೇಕಡಾ 90ರಷ್ಟು ಮುಸ್ಲಿಮರು ಏನೇ ಆಗಲಿ ಮುಸ್ಲಿಂ ಓಟುಗಳು ಛಿದ್ರವಾಗದಂತೆ ಸಾರಾಸಗಟಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದು ಈ ಚುನಾವಣೆಯ ಇನ್ನೊಂದು ವಿಶೇಷತೆಯಾಗಿತ್ತು. ನಾನು ವಾಸವಾಗಿರುವ ಮನೆಯ ಹತ್ತಿರದ ಮಸೀದಿಯಲ್ಲಿ ಮೇಲಿಂದ ಮೇಲೆ ಮೈಕ್ ಮೂಲಕ ‘‘ಸಮಯವಾಗಿದೆ ಬೇಗ ಹೋಗಿ ಮತ ಚಲಾಯಿಸಿ ಬನ್ನಿ’’ ಎಂದು ಜನರಿಗೆ ಕರೆ ಕೊಡುತ್ತಿದ್ದುದು ಮಗದೊಂದು ವಿಶೇಷತೆಯಾಗಿತ್ತು.

 ಈ ಸಲದ ಚುನಾವಣೆಯಲ್ಲಿ ಕರ್ನಾಟಕದ ಮುಖ್ಯ ಮಂತ್ರಿಗಳ ಘನತೆಯ ನಡೆ ಬೇರೆ ರಾಜ್ಯಗಳಿಗೂ ಒಂದು ಮಾದರಿಯಾಗಿದೆ. ಚುನಾವಣೆಯಲ್ಲಿ ಅನ್ನಭಾಗ್ಯ, ಕ್ಷೀರ ಭಾಗ್ಯ ವಿದ್ಯಾರ್ಥಿಗಳ ಫ್ರೀ ಪಾಸ್, ರೈತ ಸಾಲ ಮನ್ನಾ ಮಾಡಿದ್ದು. ಅಲ್ಪಸಂಖ್ಯಾತ, ದಲಿತ ಮತ್ತು ಬಡವರ ಪರವಾದ ಅವರ ಕಾಳಜಿಗಳು ಮತ್ತು ಮಹಿಳಾ ಪರವಾದ ಧೋರಣೆಗಳು ನಮ್ಮ ರಾಜ್ಯವನ್ನು ಭಿನ್ನ ಹಾಗೂ ಗೌರವದ ಸ್ಥಾನಕ್ಕೇರಿಸಿದೆ. ಆದ್ದರಿಂದ ಸಿದ್ದರಾಮಯ್ಯ ಈ ಚುನಾವಣೆಯ ಘನತೆಯಾಗಿದ್ದಾರೆ.

-ಡಾ.ಕೆ.ಷರೀಫಾ, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News