ಗೋವಾ ಮುಖ್ಯಮಂತ್ರಿಯ ಅವಹೇಳನ: ದೂರು ದಾಖಲು
ಪಣಜಿ, ಮೇ 14: ಪಣಜಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್‌ರನ್ನು ಗೋವಾ ಸುರಕ್ಷಾ ಮಂಚ್(ಜಿಎಸ್‌ಎಂ) ಕಾರ್ಯಕರ್ತರು ಅವಮಾನಪಡಿಸಿದ್ದಾರೆ ಎಂದು ಮುಖ್ಯಮಂತ್ರಿಯ ಸಂಬಂಧಿ ಅಖಿಲ್ ಪಾರಿಕ್ಕರ್ ದೂರು ನೀಡಿದ್ದಾರೆ. ಇದೇ ವೇಳೆ, ಅಖಿಲ್ ಪಾರಿಕ್ಕರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಜಿಎಸ್‌ಎಂ ಕಾರ್ಯಕರ್ತರು ಪ್ರತಿ ದೂರು ದಾಖಲಿಸಿದ್ದಾರೆ. ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ , ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಾದಾಯಿ ನದಿ ನೀರನ್ನು ಕರ್ನಾಟಕದ ರೈತರಿಗೆ ಒದಗಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.
ಈ ಮಧ್ಯೆ, ರವಿವಾರ ಪಣಜಿಯಲ್ಲಿ ನಡೆದ ಅಮಿತ್ ಶಾ ಸಭೆಯ ಸಂದರ್ಭ ಜಿಎಸ್‌ಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮಾಜಿ ಆರೆಸ್ಸೆಸ್ ಕಾರ್ಯಕರ್ತರು ಸ್ಥಾಪಿಸಿರುವ ರಾಜಕೀಯ ಸಂಘಟನೆಯಾಗಿರುವ ಜಿಎಸ್‌ಎಂ ಕಾರ್ಯಕರ್ತರು ಕಾರಿನಲ್ಲಿ ಕುಟುಂಬದವರೊಂದಿಗೆ ತೆರಳುತ್ತಿದ್ದ ತಮ್ಮನ್ನು ಅಡ್ಡಗಟ್ಟಿ , ತನ್ನ ತಾಯಿಯತ್ತ ನೀರಿನ ಬಾಟಲಿಯನ್ನು ಎಸೆದಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದಾರೆ ಎಂದು ಅಖಿಲ್ ಪಾರಿಕ್ಕರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಆದರೆ ಪ್ರತಿದೂರು ದಾಖಲಿಸಿರುವ ಜಿಎಸ್‌ಎಂ ಪ್ರಧಾನ ಕಾರ್ಯದರ್ಶಿ ಆತ್ಮಾರಾಮ್ ಗಾಂವ್‌ಕರ್, ತಾವು ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಂದ ಅಖಿಲ್ ಪಾರಿಕ್ಕರ್ ಹಾಗೂ ಇತರರು ತಮ್ಮ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಎರಡೂ ದೂರಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.